ಕೇಂದ್ರದ ಬಿಜೆಪಿ ಸರ್ಕಾರ ದಕ್ಷಿಣ ಭಾರತ ವಿರೋಧಿ ನೀತಿ ಅನುಸರಿಸುತ್ತಿದೆ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ
ರೇವಂತ್ ರೆಡ್ಡಿ | PC : PTI
ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರವು ದಕ್ಷಿಣ ಭಾರತ ವಿರೋಧಿ ನೀತಿ ಅನುಸರಿಸುತ್ತಿದ್ದು, ದಕ್ಷಿಣ ರಾಜ್ಯಗಳಲ್ಲಿ ಹೂಡಿಕೆಯನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ರವಿವಾರ ಆರೋಪಿಸಿದ್ದಾರೆ ಎಂದು ʼದಿ ಹಿಂದೂʼ ವರದಿ ಮಾಡಿದೆ.
"ಯಾವುದೇ ಬಹುರಾಷ್ಟ್ರೀಯ ಕಂಪನಿಯು ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿ ಹೂಡಿಕೆ ಮಾಡಲು ಪ್ರಯತ್ನಿಸಿದರೆ, ಗುಜರಾತ್‌ಗೆ ಹೂಡಿಕೆಯನ್ನು ತೆಗೆದುಕೊಂಡು ಹೋಗಲು ಪ್ರಧಾನಿ ಕಚೇರಿಯಿಂದ ನೇರ ಕರೆ ಬರುತ್ತದೆ" ಎಂದು ರೇವಂತ್ ರೆಡ್ಡಿ ಕರ್ನಾಟಕದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಬಿಜೆಪಿ ಸರ್ಕಾರದ ದಕ್ಷಿಣದ ವಿರುದ್ಧದ ತಾರತಮ್ಯವು ಖಾತೆಗಳು ಮತ್ತು ಸಾಂವಿಧಾನಿಕ ಹುದ್ದೆಗಳ ಹಂಚಿಕೆಯಲ್ಲಿಯೂ ಗೋಚರಿಸುತ್ತದೆ ಎಂದು ಅವರು ಹೇಳಿರುವುದಾಗಿ ʼದಿ ಹಿಂದೂʼ ವರದಿ ಮಾಡಿದೆ.
"ದಕ್ಷಿಣ ಭಾರತದ ನಾಯಕತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಅಗತ್ಯವಿಲ್ಲ ಎಂಬ ಮನಸ್ಥಿತಿಯಲ್ಲಿ ಬಿಜೆಪಿ ಇದೆ, ಹಾಗಾಗಿ, ನಾಮಮಾತ್ರ ಪ್ರಾತಿನಿಧ್ಯವು ನೀಡುತ್ತಾ ಬಂದಿದೆ” ಎಂದು ಅವರು ಹೇಳಿದ್ದಾರೆ.
ಕೇಂದ್ರ ಸಚಿವ ಸಂಪುಟದಲ್ಲಿ ದಕ್ಷಿಣ ಭಾರತದಿಂದ ಎಷ್ಟು ಸಚಿವರಿದ್ದಾರೆ ಎಂಬ ಪ್ರಶ್ನೆಯನ್ನು ಎತ್ತಿರುವ ರೆಡ್ಡಿ, ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಉತ್ತರ ಮತ್ತು ದಕ್ಷಿಣದ ನಾಯಕರ ಪ್ರಾತಿನಿಧ್ಯದ ನಡುವೆ ಉತ್ತಮ ಸಮತೋಲನವಿತ್ತು ಎಂದು ಹೇಳಿದರು.
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ, ಸ್ಪೀಕರ್ ಅಥವಾ ಅವರ ಪಕ್ಷದ ಅಧ್ಯಕ್ಷರು ಎಲ್ಲರೂ ಉತ್ತರ ಭಾರತದವರು ಎಂದು ರೆಡ್ಡಿ ಗಮನಸೆಳೆದರು.
ತಾರತಮ್ಯ ನಡೆಯುತ್ತಿದ್ದು, ಪಕ್ಷದಿಂದ ಯಾರೂ ಮಾತನಾಡುವ ಧೈರ್ಯ ಮಾಡುತ್ತಿಲ್ಲ. ಸ್ವಲ್ಪ ಬಲವಾಗಿ ಬೆಳೆಯುವ ಎಲ್ಲರನ್ನೂ ಮನೆಗೆ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಭಾರತದಲ್ಲಿ ಬಿಜೆಪಿ ಗೆಲ್ಲಲು ವಿಫಲವಾಗಲಿದೆ ಎಂದು ಹೇಳಿರುವ ಅವರು, ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಐದು ರಾಜ್ಯಗಳ 131 ಸ್ಥಾನಗಳಲ್ಲಿ ಬಿಜೆಪಿ 20 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ರೆಡ್ಡಿ ಹೇಳಿದರು.