ದ್ವೇಷ ಭಾಷಣ ಪ್ರಕರಣ | ಕೇರಳ ನ್ಯಾಯಾಲಯಕ್ಕೆ ಶರಣಾದ ಬಿಜೆಪಿ ನಾಯಕ ಪಿ.ಸಿ.ಜಾರ್ಜ್
ಕೇರಳ ಬಿಜೆಪಿ ನಾಯಕ ಪಿ.ಸಿ.ಜಾರ್ಜ್ | PTI
ಕೊಟ್ಟಾಯಂ: ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಪಿ.ಸಿ.ಜಾರ್ಜ್ ಸೋಮವಾರ ಕೊಟ್ಟಾಯಂ ಜಿಲ್ಲೆಯ ಎರಟ್ಟುಪೆಟ್ಟಾ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
"ಜಾರ್ಜ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ ಎಂದು ನಮಗೆ ಮಾಹಿತಿ ಬಂದಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕೇರಳ ಹೈಕೋರ್ಟ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ ನಂತರ ಪೊಲೀಸರು ಜಾರ್ಜ್ ಅವರನ್ನು ವಶಕ್ಕೆ ಪಡೆಯಲು ಯತ್ನಿಸಿದಾಗ ಅವರು ನ್ಯಾಯಾಲಯಕ್ಕೆ ಶರಣಾದರು ಎಂದು ತಿಳಿದು ಬಂದಿದೆ.
ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗಾಗಿ ತಮ್ಮ ಮುಂದೆ ಹಾಜರಾಗಲು ಫೆಬ್ರವರಿ 24 ರವರೆಗೆ ಅವಕಾಶ ನೀಡುವಂತೆ, ಶನಿವಾರ ಜಾರ್ಜ್ ಪೊಲೀಸರನ್ನು ಕೋರಿದ್ದರು.
ಜಾರ್ಜ್ ಅವರ ಅರ್ಜಿಯನ್ನು ವಜಾಗೊಳಿಸಿದ ಹೈಕೋರ್ಟ್, ದ್ವೇಷ ಭಾಷಣ ಪ್ರಕರಣದಲ್ಲಿ ಜಾಮೀನು ನೀಡುವುದು ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸುತ್ತದೆ ಎಂದು ಹೇಳಿತು.
ಮಾಜಿ ಶಾಸಕ ಜಾರ್ಜ್ ಅವರ ಮೇಲೆ ಟಿವಿ ಚಾನೆಲ್ ಚರ್ಚೆಯಲ್ಲಿ ಪಾಲ್ಗೊಂಡ ವೇಳೆ, ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ದ್ವೇಷ ಭಾಷಣ ಮಾಡಿದ ಆರೋಪ ಹೊರಿಸಲಾಗಿತ್ತು.
ಮುಸ್ಲಿಂ ಯೂತ್ ಲೀಗ್ ನಾಯಕ ಮುಹಮ್ಮದ್ ಶಿಹಾಬ್ ಅವರು ನೀಡಿದ ದೂರಿನ ಆಧಾರದ ಮೇಲೆ ಎರಟ್ಟುಪೆಟ್ಟಾ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿದ್ದರು. ಕೊಟ್ಟಾಯಂ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಅವರಿಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನಂತರ, ಅವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಜಾರ್ಜ್ ವಿರುದ್ಧ ಬಿಎನ್‌ಎಸ್‌ನ ಸೆಕ್ಷನ್ 196(1)(ಎ) ಮತ್ತು 299 ಹಾಗೂ ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120(ಒ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.