×
Ad

ಉತ್ತರ ಪ್ರದೇಶ | ಸಿಎಂ ಯೋಗಿ ಆದಿತ್ಯನಾಥ್ ರನ್ನು ಭೇಟಿಯಾದ ಬೆನ್ನಿಗೇ ಬಿಜೆಪಿ ನಾಯಕನ ಸಹೋದರನ ಗುಜರಿ ಕಾರ್ಖಾನೆಯ ಮೇಲೆ ದಾಳಿ: ಪ್ರಕರಣ ದಾಖಲು

Update: 2025-04-20 20:03 IST

Photo: X/@myogioffice

ಸಂಭಾಲ್: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಭೇಟಿಯಾದ ಬೆನ್ನಿಗೇ, ಪೂರ್ವ ಉತ್ತರ ಪ್ರದೇಶದ ಬಿಜೆಪಿ ಪ್ರಾಂತೀಯ ಉಪಾಧ್ಯಕ್ಷ ರಾಜೇಶ್ ಸಿಂಘಾಲ್ ರ ಸಹೋದರ ಕಪಿಲ್ ಸಿಂಘಾಲ್ ಮಾಲಕತ್ವದ ಗುಜರಿ ಕಾರ್ಖಾನೆಯ ಮೇಲೆ ಪೊಲೀಸರು ದಾಳಿ ನಡೆಸಿರುವ ಘಟನೆ ವರದಿಯಾಗಿದೆ.

ಈ ದಾಳಿಯ ವೇಳೆ, ವಾಹನಗಳ ಕಳಚಿದ ಬಿಡಿ ಭಾಗಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಕಾರ್ಖಾನೆಯಲ್ಲಿ ಕಳವು ಮಾಡಿದ ವಾಹನಗಳನ್ನು ಕಾನೂನುಬಾಹಿರವಾಗಿ ಗುಜರಿಯಾಗಿಸಲಾಗುತ್ತಿತ್ತು ಎಂಬ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಕಪಿಲ್ ಸಿಂಘಾಲ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.

ಈ ದಾಳಿ ನಡೆಯುವುದಕ್ಕೂ ಮುನ್ನ, ಎಪ್ರಿಲ್ 13ರಂದು ಸಹೋದರರಾದ ರಾಜೇಶ್ ಸಿಂಘಾಲ್ ಹಾಗೂ ಕಪಿಲ್ ಸಿಂಘಾಲ್ ಇಬ್ಬರೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರನ್ನು ಭೇಟಿ ಮಾಡಿದ್ದರು. ನಂತರ, ಇದು ಸೌಜನ್ಯದ ಭೇಟಿ ಎಂದು ಅವರು ಹೇಳಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ದಾಳಿ ಮಹತ್ವ ಪಡೆದುಕೊಂಡಿದೆ.

ಮುಖ್ಯಮಂತ್ರಿಗಳ ಕಚೇರಿಯಿಂದ ಸಾಮಾಜಿಕ ಮಾಧ್ಯಮದಲ್ಲಿ ಅಧಿಕೃತವಾಗಿ ಹಂಚಿಕೊಳ್ಳಲಾಗಿದ್ದ ಈ ಭೇಟಿಯ ಭಾವಚಿತ್ರದಲ್ಲಿ ಕಂಡು ಬಂದಿದ್ದ ಕಪಿಲ್ ಸಿಂಘಾಲ್ ರನ್ನು ಉತ್ತರ ಪ್ರದೇಶ ವೈಶ್ಯ ಮಹಾಸಭಾದ ರಾಜ್ಯ ಸಚಿವ ಎಂದು ಉಲ್ಲೇಖಿಸಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News