×
Ad

ಗಯಾ ವಿಮಾನ ನಿಲ್ದಾಣಕ್ಕೆ ‘ GAY’ ಕೋಡ್ ಅವಹೇಳನಕಾರಿ: ಬಿಜೆಪಿ ಸಂಸದ ಕಳವಳ

Update: 2025-08-06 16:54 IST

Photo: X @aaigayaairport

ಹೊಸದಿಲ್ಲಿ: ಬಿಹಾರದ ಗಯಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂತರರಾಷ್ಟ್ರೀಯ ವಾಯು ಸಾರಿಗೆ ಸಂಘ(ಐಎಟಿಎ)ವು ನೀಡಿರುವ ಗುರುತಿನ ಸಂಕೇತ ‘ GAY’ ಬಗ್ಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ಭೀಮಸಿಂಗ್ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ‘ GAY’ಪದವು ‘ಸಲಿಂಗಕಾಮಿ’ ಎಂಬ ಅರ್ಥವನ್ನು ನೀಡುತ್ತದೆ.

ಸಂಸದರ ಕಳವಳಕ್ಕೆ ಪ್ರತಿಕ್ರಿಯಿಸಿದ ಸಹಾಯಕ ನಾಗರಿಕ ವಾಯುಯಾನ ಸಚಿವ ಮುರಳೀಧರ ಮೊಹೊಲ್ ಅವರು, ಒಮ್ಮೆ ನೀಡಲಾಗಿರುವ ಮೂರು ಅಕ್ಷರಗಳ ವಿಮಾನ ನಿಲ್ದಾಣ ಕೋಡ್‌ಗಳನ್ನು ಶಾಶ್ವತ ಎಂದು ಪರಿಗಣಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ವಾಯು ಸುರಕ್ಷತೆ ಕಳವಳಗಳನ್ನೊಳಗೊಂಡ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಅವುಗಳನ್ನು ಬದಲಿಸಲಾಗುತ್ತದೆ ಎಂದು ಸೋಮವಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದರು.

ವಿವಿಧ ಪ್ರಯಾಣ ಸಂಬಂಧಿತ ವ್ಯವಸ್ಥೆಗಳು ಮತ್ತು ಪ್ರಕ್ರಿಯೆಗಳಲ್ಲಿ ವಿಮಾನ ನಿಲ್ದಾಣಗಳನ್ನು ಗುರುತಿಸಲು ಅನುಕೂಲವಾಗುವಂತೆ ಅವುಗಳಿಗೆ ಮೂರು ಅಕ್ಷರಗಳ ಸಂಕೇತವನ್ನು ಐಎಟಿಎ ನೀಡುತ್ತದೆ.

ಈ ಕೋಡ್‌ಗಳನ್ನು ಸಾಮಾನ್ಯವಾಗಿ ವಿಮಾನ ನಿಲ್ದಾಣವು ಇರುವ ಸ್ಥಳದ ಹೆಸರಿನ ಮೂರು ಅಕ್ಷರಗಳನ್ನು ಬಳಸಿ ನಿಯೋಜಿಸಲಾಗುತ್ತದೆ ಎಂದು ಮೊಹೋಲ್ ತಿಳಿಸಿದರು.

ಈ ಹಿಂದೆ ನಾಗರಿಕ ವಾಯುಯಾನ ಸಚಿವಾಲಯ ಮತ್ತು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಗಯಾ ವಿಮಾನ ನಿಲ್ದಾಣದ ಕೋಡ್‌ನ್ನು ಬದಲಿಸುವಂತೆ ಮನವಿಗಳನ್ನು ಸ್ವೀಕರಿಸಿವೆ ಎಂದೂ ಉಲ್ಲೇಖಿಸಿದ ಅವರು,ಐಎಟಿಎ ಸ್ಥಳ ಸಂಕೇತಗಳು ಮುಖ್ಯವಾಗಿ ವಾಣಿಜ್ಯ ವಿಮಾನಗಳ ಕಾರ್ಯಾಚರಣೆಗಾಗಿ ಇರುತ್ತವೆ ಮತ್ತು ವಾಯುಯಾನ ನಿರ್ವಾಹಕರ ಕೋರಿಕೆಯ ಮೇರೆಗೆ ಅವುಗಳನ್ನು ನೀಡಲಾಗುತ್ತದೆ. ಈಗಿನ ವಿಮಾನ ನಿಲ್ದಾಣ ಕೋಡ್ ಬದಲಿಸುವಂತೆ ಏರ್ ಇಂಡಿಯಾ ಈ ಹಿಂದೆ ಐಎಟಿಎ ಅನ್ನು ಕೋರಿತ್ತು. ಆದರೆ ಐಎಟಿಎ ನಿರ್ಣಯ 763ರ ನಿಬಂಧನೆಗಳಡಿ ನಿಯೋಜಿತ ಮೂರು ಅಕ್ಷರಗಳ ಸಂಕೇತಗಳನ್ನು ಶಾಶ್ವತ ಎಂದು ಪರಿಗಣಿಸಲಾಗುತ್ತದೆ ಮತ್ತು ಕೆಲವು ಅಪರೂಪದ ಸಂದರ್ಭಗಳಲ್ಲಿ ಮಾತ್ರ ಅದನ್ನು ಬದಲಿಸಬಹುದು ಎಂದು ಅದು ತಿಳಿಸಿತ್ತು ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News