ಮೋದಿ ಗಂಗಾ ಜಲದಷ್ಟೇ ಪವಿತ್ರ; ರಾಹುಲ್ ಗಾಂಧಿಯವರದ್ದು ಕಳ್ಳರ ಕುಟುಂಬ: ಬಿಜೆಪಿ ಕಿಡಿ
ನರೇಂದ್ರ ಮೋದಿ, ರಾಹುಲ್ ಗಾಂಧಿ |PTI
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರು ಗಂಗಾ ಜಲದಷ್ಟೇ ಪವಿತ್ರವಾಗಿದ್ದಾರೆ ಎಂದು ಬುಧವಾರ ಘೋಷಿಸಿರುವ ಬಿಜೆಪಿ, ಗುಜರಾತ್ ಮಾಡೆಲ್ ಅನ್ನು ಅಲ್ಲಗಳೆಯುವ ರಾಹುಲ್ ಗಾಂಧಿ ಅವರದ್ದು ಅತ್ಯಂತ ಭ್ರಷ್ಟ ಹಾಗೂ ಕಳ್ಳರ ಕುಟುಂಬವಾಗಿದೆ ಎಂದು ಟೀಕಾಪ್ರಹಾರ ನಡೆಸಿದೆ.
ಬಿಹಾರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ, ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಆಡಳಿತಾರೂಢ ಪಕ್ಷ ಪ್ರಚಾರ ಮಾಡಿದ್ದ ಪ್ರಗತಿಯು ಕೇವಲ ಮತದ ಕಳ್ಳತನವಾಗಿತ್ತು ಎಂದು ರಾಹುಲ್ ಗಾಂಧಿ ಟೀಕಿಸಿದ ಬೆನ್ನಿಗೇ, ಬಿಜೆಪಿಯ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾರಿಂದ ಈ ತೀವ್ರ ವಾಗ್ದಾಳಿ ನಡೆದಿದೆ.
“ಯಾರದಾದರೂ ಅತ್ಯಂತ ಭ್ರಷ್ಟ ಮತ್ತು ಕಳ್ಳ ಕುಟುಂಬವಿದ್ದರೆ ಅದು ಗಾಂಧಿ ಕುಟುಂಬ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ರಾಬರ್ಟ್ ವಾದ್ರಾ ಎಲ್ಲರೂ ಭ್ರಷ್ಟಾಚಾರದ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿದ್ದಾರೆ” ಎಂದು ವಾಗ್ದಾಳಿ ನಡೆಸಿರುವ ಗೌರವ್ ಭಾಟಿಯಾ, ರಾಹುಲ್ ಗಾಂಧಿ ‘ಚೌಕಿದಾರ್ ಚೋರ್ ಹೈ’ ಎಂದು ಕೂಗಿದ ಘೋಷಣೆ ಅವರಿಗೇ ತಿರುಗುಬಾಣವಾಗಿತ್ತು ಎಂದು ನೆನಪಿಸಿದ್ದಾರೆ.
“ಮೋದಿ ಗಂಗಾ ಜಲದಷ್ಟೇ ಪವಿತ್ರವಾಗಿದ್ದಾರೆ. ಅವರು ಜನರ ಸೇವೆಗೆ ಸಂಪೂರ್ಣವಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ” ಎಂದು ಸಮರ್ಥಿಸಿಕೊಂಡಿರುವ ಗೌರವ್ ಭಾಟಿಯಾ, “ರಾಹುಲ್ ಗಾಂಧಿ ತಮ್ಮ ಸಭೆಯಲ್ಲಿ ಪತ್ತೆಯಾಗದ ಆರೋಪ ಹಾಗೂ ಕೀಳುಮಟ್ಟದ ಭಾಷೆಯನ್ನು ಪ್ರಧಾನಿಯ ವಿರುದ್ಧ ಬಳಸಿದ್ದಾರೆ” ಎಂದು ಟೀಕಿಸಿದ್ದಾರೆ.