ದಿಲ್ಲಿ ವಿಧಾನಸಭಾ ಚುನಾವಣೆ | 57.65 ಕೋಟಿ ರೂ. ವೆಚ್ಚ ಮಾಡಿದ ಬಿಜೆಪಿ; ಆಪ್ ನಿಂದ 14.51 ಕೋಟಿ ರೂ. ಖರ್ಚು
pc :deccanherald.com
ಹೊಸದಿಲ್ಲಿ: ಈ ವರ್ಷಾರಂಭದಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸುಮಾರು 27 ವರ್ಷಗಳ ನಂತರ ಅಧಿಕಾರಕ್ಕೆ ಮರಳಿರುವ ಬಿಜೆಪಿ, ಒಟ್ಟು 57.65 ಕೋಟಿ ರೂ. ವೆಚ್ಚ ಮಾಡಿದ್ದರೆ, 10 ವರ್ಷಗಳ ಆಡಳಿತದ ನಂತರ, ಅಧಿಕಾರದಿಂದ ಪದಚ್ಯುತಗೊಂಡ ಆಪ್ ಒಟ್ಟು 14.51 ಕೋಟಿ ರೂ. ವೆಚ್ಚ ಮಾಡಿದೆ ಎಂಬ ಮಾಹಿತಿಯು ಭಾರತೀಯ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ವೆಚ್ಚ ವರದಿಗಳಿಂದ ಬಹಿರಂಗವಾಗಿದೆ.
ಇದೇ ವೇಳೆ, ಜನವರಿ-ಫೆಬ್ರವರಿ ತಿಂಗಳಲ್ಲಿ ನಡೆದ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸತತ ಎರಡನೆ ಬಾರಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್ ಕೂಡಾ ಒಟ್ಟು 46.19 ಕೋಟಿ ರೂ. ವೆಚ್ಚ ಮಾಡಿರುವುದೂ ಈ ವರದಿಗಳಿಂದ ಬೆಳಕಿಗೆ ಬಂದಿದೆ.
ದಿಲ್ಲಿ ವಿಧಾನಸಭೆಯ 70 ಸ್ಥಾನಗಳ ಪೈಕಿ 48 ಸ್ಥಾನಗಳಲ್ಲಿ ಜಯಭೇರಿ ಬಾರಿಸುವ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದರೆ, ಸತತ 10 ವರ್ಷಗಳ ನಂತರ, ಅಧಿಕಾರದಿಂದ ಪದಚ್ಯುತಗೊಂಡಿದ್ದ ಆಪ್ 22 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಂಡಿತ್ತು. ಜನವರಿ 7ರಂದು ಚುನಾವಣಾ ವೇಳಾಪಟ್ಟಿ ಪ್ರಕಟಣೆಗೊಂಡು, ಫೆಬ್ರವರಿ 8ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಂಡಿತ್ತು.
ಕಾನೂನಿನಂತೆ, ಚುನಾವಣಾ ಆಯೋಗಕ್ಕೆ ಬಿಜೆಪಿ ಸಲ್ಲಿಸಿರುವ ವೆಚ್ಚ ವರದಿಯ ಪ್ರಕಾರ, ದಿಲ್ಲಿ ವಿಧಾನಸಭಾ ಚುನಾವಣಾ ಪ್ರಕ್ರಿಯೆ ವೇಳೆ, ಬಿಜೆಪಿ ಕೇಂದ್ರೀಯ ಮುಖ್ಯ ಕಚೇರಿಯು ಒಟ್ಟು 87.79 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿತ್ತು ಎನ್ನಲಾಗಿದೆ.
ಈ ಚುನಾವಣಾ ಪ್ರಕ್ರಿಯೆಯಲ್ಲಿ ಬಿಜೆಪಿ ಮಾಡಿದ್ದ ಒಟ್ಟು 57.65 ಕೋಟಿ ರೂ. ಮೊತ್ತದ ಚುನಾವಣಾ ವೆಚ್ಚದ ಪೈಕಿ, ಪಕ್ಷದ ಸಾಮಾನ್ಯ ಕಾರ್ಯಸೂಚಿಗಾಗಿ ಒಟ್ಟು 39.15 ಕೋಟಿ ರೂ. ವೆಚ್ಚ ಮಾಡಿದ್ದರೆ, ಇನ್ನುಳಿದ 18.51 ಕೋಟಿ ರೂ. ಅನ್ನು ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನಾಗಿ ವ್ಯಯಿಸಿದೆ.
ಮತ್ತೊಂದೆಡೆ, ಆಪ್ ಪಕ್ಷವು ಒಟ್ಟಾರೆಯಾಗಿ 14.51 ಕೋಟಿ ರೂ. ಚುನಾವಣಾ ವೆಚ್ಚ ಮಾಡಿದ್ದು, ಈ ಪೈಕಿ, ಪಕ್ಷದ ಸಾಮಾನ್ಯ ಕಾರ್ಯಸೂಚಿಗಾಗಿ ಒಟ್ಟು 12.12 ಕೋಟಿ ರೂ. ವೆಚ್ಚ ಮಾಡಿದ್ದರೆ, ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚವಾಗಿ ಇನ್ನುಳಿದ 2.39 ಕೋಟಿ ರೂ. ಅನ್ನು ವ್ಯಯಿಸಿದೆ. ಈ ವಿಧಾನಸಭಾ ಚುನಾವಣಾ ಪ್ರಕ್ರಿಯೆ ವೇಳೆ ಆಪ್ ಪಕ್ಷವು ಒಟ್ಟು 16.10 ಕೋಟಿ ರೂ. ದೇಣಿಗೆಯನ್ನು ಸ್ವೀಕರಿಸಿದೆ.
ಮತ್ತೊಂದು ಪ್ರಮುಖ ಪಕ್ಷವಾದ ಕಾಂಗ್ರೆಸ್, ಈ ಚುನಾವಣೆಯಲ್ಲಿ ಸಾಮಾನ್ಯ ವೆಚ್ಚವಾಗಿ 40.13 ಕೋಟಿ ರೂ. ಹಾಗೂ ಪಕ್ಷದ ಅಭ್ಯರ್ಥಿಗಳ ಇನ್ನಿತರ ವೆಚ್ಚವನ್ನಾಗಿ 6.06 ಕೋಟಿ ರೂ. ಸೇರಿದಂತೆ ಒಟ್ಟು 46.19 ಕೋಟಿ ರೂ. ವೆಚ್ಚ ಮಾಡಿದೆ.