×
Ad

ಕೇಜ್ರಿವಾಲ್ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಧರಣಿ

Update: 2024-03-26 13:56 IST

Photo: PTI 

ಹೊಸದಿಲ್ಲಿ: ಮದ್ಯ ನೀತಿ ಹಗರಣದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ್ದನ್ನು ಖಂಡಿಸಿ, ಅವರ ಬಿಡುಗಡೆಗೆ ಆಗ್ರಹಿಸಿ ದೆಹಲಿಯಲ್ಲಿ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

ಪ್ರಧಾನಿ ನಿವಾಸಕ್ಕೆ ಇರುವ ರಸ್ತೆಯಲ್ಲಿ ದೆಹಲಿ ಪೊಲೀಸರು ಬಿಗಿ ಭದ್ರತೆ ವ್ಯವಸ್ಥೆಗೊಳಿಸಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಕೆಲ ಮೆಟ್ರೋ ನಿಲ್ದಾಣಗಳನ್ನು ಇಂದು ಮುಚ್ಚಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಏತನ್ಮಧ್ಯೆ ಬಿಜೆಪಿ ಕಾರ್ಯಕರ್ತರು ಫಿರೋಜ್ ಶಾ ಕೋಟ್ಲಾ ಸ್ಟೇಡಿಯಂನಿಂದ ದೆಹಲಿ ಸೆಕ್ರೇಟರಿಯೇಟ್ ಕಚೇರಿಗೆ ಬೃಹತ್ ಪಾದಯಾತ್ರೆ ನಡೆಸಿ ಕೇಜ್ರಿವಾಲ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಜೈಲಿನಿಂದ ಕಾರ್ಯನಿರ್ವಹಿಸುತ್ತಿರುವ ಕೇಜ್ರಿ ಕ್ರಮ ನಾಚಿಕೆಗೇಡು ಎಂದು ಅವರು ಬಣ್ಣಿಸಿದ್ದಾರೆ.

ರವಿವಾರ ಕೂಡಾ ಆಮ್ ಆದ್ಮಿ ಕಾರ್ಯಕರ್ತರು ದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಕೂಡಾ ಭಾಗವಹಿಸಿದ್ದವು. ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಸಚಿವ ಗೋಪಾಲ್ ರಾಯ್, ಕೇಜ್ರಿವಾಲ್ ಅವರನ್ನು ಬಂಧಿಸಿದ ಕ್ರಮದ ಬಗ್ಗೆ ಜನಸಾಮಾನ್ಯರಲ್ಲಿ ಆಕ್ರೋಶವಿದೆ ಎಂದು ಹೇಳಿದರು.

ದಿಲ್ಲಿ ಕಾಂಗ್ರೆಸ್ ಮುಖ್ಯಸ್ಥ ಅರವಿಂದರ್ ಸಿಂಗ್ ಲವ್ಲಿ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿ, ಇದು ಪ್ರಜಾಪ್ರಭುತ್ವವೇ ಎಂದು ಪ್ರಶ್ನಿಸಿದ್ದಾರೆ. ಚುನಾಯಿತ ಮುಖ್ಯಮಂತ್ರಿಗಳನ್ನು ನೀವು ಬಂಧಿಸುತ್ತೀರಿ. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷದ ಖಾತೆಗಳನ್ನು ತಡೆಹಿಡಿಯುತ್ತೀರಿ, ನಮ್ಮ ನಾಯಕ ರಾಹುಲ್‍ಗಾಂಧಿಯವರು ಪ್ರಜಾಪ್ರಭುತ್ವ ಉಳಿಸಲು ಸಮರ ಸಾರಿದ್ದಾರೆ. ಯಾವುದೇ ಹಂತದಲ್ಲೂ ಕಾಂಗ್ರೆಸ್ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News