×
Ad

ಅಕ್ರಮ ವಲಸಿಗರ ಸಮಸ್ಯೆ ಪರಿಹಾರಕ್ಕೆ ‘ಸರ್ಜಿಕಲ್ ಸ್ಟ್ರೈಕ್’ ಗೆ ಕರೆ ನೀಡಿದ ಬಿಜೆಪಿ ಮಿತ್ರಪಕ್ಷ

Update: 2023-08-12 19:42 IST

ಎಮ್. ರಾಮೇಶ್ವರ್ ಸಿಂಗ್ |  Photo: Twitter \ @bjp4manipur

ಹೊಸದಿಲ್ಲಿ: ಮಣಿಪುರದಲ್ಲಿರುವ ‘‘ಅಕ್ರಮ ವಲಸಿಗರು ಮತ್ತು ಬಂಡುಕೋರರ’’ ಸಮಸ್ಯೆ ನಿವಾರಣೆಗೆ ಒಮ್ಮೆ ‘ಸರ್ಜಿಕಲ್ ದಾಳಿ’ ನಡೆಸಬೇಕು ಎಂದು ನ್ಯಾಶನಲ್ ಪೀಪಲ್ಸ್ ಪಾರ್ಟಿ (ಎನ್ಪಿಪಿ) ನಾಯಕ ಎಮ್. ರಾಮೇಶ್ವರ್ ಸಿಂಗ್ ಹೇಳಿದ್ದಾರೆ.

ಎನ್ಪಿಪಿಯು ಮಣಿಪುರದಲ್ಲಿ ಬಿಜೆಪಿಯ ಮಿತ್ರಪಕ್ಷವಾಗಿದೆ. ಮಣಿಪುರದಲ್ಲಿ ಮೂರು ತಿಂಗಳುಗಳಿಂದ ಜನಾಂಗೀಯ ಹಿಂಸಾಚಾರ ನಡೆಯುತ್ತಿದ್ದು, 150ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

‘‘ಕೆಲವು ಕುಕಿ ಬಂಡುಕೋರರು ಮತ್ತು ವಲಸಿಗರು ಗಡಿಯಾಚೆಯಿಂದ ಬರುತ್ತಿದ್ದಾರೆ ಎನ್ನುವುದು ಗೃಹ ಸಚಿವರು ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇದರಲ್ಲಿ ಬಾಹ್ಯ ಆಕ್ರಮಣ ಇದೆ ಎಂದು ನಾನು ಯಾವತ್ತಿನಿಂದಲೂ ಹೇಳುತ್ತಿದ್ದೇನೆ. ರಾಷ್ಟ್ರೀಯ ಭದ್ರತೆಯೊಂದಿಗೂ ರಾಜಿ ಮಾಡಿಕೊಳ್ಳಲಾಗಿದೆ’’ ಎಂದು ಎನ್ಪಿಪಿ ನಾಯಕ ಹೇಳಿದರು.

‘‘ಮಣಿಪುರ ಮಾತ್ರವಲ್ಲ, ಇಡೀ ದೇಶವನ್ನು ರಕ್ಷಿಸುವುದು ನಮಗೆ ಅಗತ್ಯವಾಗಿದೆ. ಈ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಸರ್ಜಿಕಲ್ ದಾಳಿಯಂಥ ಕೆಲವು ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಿದೆ’’ ಎಂದು ಎಮ್. ರಾಮೇಶ್ವರ್ ಸಿಂಗ್ ಹೇಳಿದರು.

ಮಣಿಪುರದಲ್ಲಿ ವಾಸಿಸುತ್ತಿರುವ ಮ್ಯಾನ್ಮಾರ್ನ ಅಕ್ರಮ ವಲಸಿಗರ ಬಯೋಮೆಟ್ರಿಕ್ ವಿವರಗಳ ದಾಖಲಾತಿಯನ್ನು ಮಣಿಪುರ ಸರಕಾರ ಕಳೆದ ತಿಂಗಳು ಆರಂಭಿಸಿದೆ. ಜುಲೈ ತಿಂಗಳ ಕೆಲವೇ ದಿನಗಳಲ್ಲಿ ಸುಮಾರು 700 ಅಕ್ರಮ ವಲಸಿಗರು ರಾಜ್ಯವನ್ನು ಪ್ರವೇಶಿಸಿದ್ದಾರೆ ಎಂಬ ವರದಿಗಳ ಬಗ್ಗೆ ಮಣಿಪುರ ಸರಕಾರ ಕಳವಳ ವ್ಯಕ್ತಪಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News