ವಿಮಾನದ ಬ್ಲ್ಯಾಕ್ ಬಾಕ್ಸ್ ಡಿಕೋಡಿಂಗ್ ಆದ ಬಳಿಕ ದುರಂತದ ಹಿಂದಿನ ಕಾರಣ ಹೊರಬರಲಿದೆ: ಕೇಂದ್ರ ವಿಮಾನಯಾನ ಸಚಿವ
ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರಪು (Photo: indiatoday.in)
ಹೊಸದಿಲ್ಲಿ: ಅಹಮದಾಬಾದ್ ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ಸಮಿತಿಗೆ ಮೂರು ತಿಂಗಳ ಕಾಲಾವಕಾಶವನ್ನು ನೀಡಲಾಗಿದೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರಪು ಹೇಳಿದ್ದಾರೆ.
ಹೊಸದಿಲ್ಲಿಯ ಉಡಾನ್ ಭವನದಲ್ಲಿ ಶನಿವಾರ ಮಧ್ಯಾಹ್ನ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ವಿಮಾನ ದುರಂತದ ಬಳಿಕ ಕೇಂದ್ರ ಸರ್ಕಾರದ ಅಧಿಕೃತ ಮೊದಲ ಸುದ್ದಿಗೋಷ್ಠಿ ಇದಾಗಿತ್ತು.
ಕಳೆದ ಎರಡು ದಿನಗಳು ಕೇಂದ್ರ ಸರ್ಕಾರ ಮತ್ತು ನಾಗರಿಕ ವಿಮಾನಯಾನ ಸಚಿವಾಲಯದ ಪಾಲಿಗೆ ಬಹಳ ಕಷ್ಟದ ದಿನವಾಗಿತ್ತು. ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ನಡೆದ ದುರಂತವು ಇಡೀ ದೇಶದ ಪಾಲಿಗೆ ನೋವಿನ ಸಂಗತಿ. ವಿಮಾನ ದುರಂತದಲ್ಲಿ ಮಡಿದ ಕುಟುಂಬಗಳಿಗೆ ನಮ್ಮ ತೀವ್ರ ಸಂತಾಪಗಳು. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಾಗಿದೆ ನೋವು ನನಗೆ ಅರ್ಥವಾಗುತ್ತದೆ. ನನ್ನ ತಂದೆಯನ್ನು ಕೂಡ ನಾನು ಕಾರು ಅಪಘಾತದಲ್ಲಿ ಕಳೆದುಕೊಂಡಿದ್ದೇನೆ. ಹಾಗಾಗಿ ಆ ನೋವಿನ ಅರಿವು ನನಗಿದೆ ಎಂದು ಅವರು ಹೇಳಿದರು.
ವಿಮಾನ ದುರಂತದ ಮಾಹಿತಿ ಬಂದ ತಕ್ಷಣ ನಾನು ದುರಂತ ನಡೆದ ಸ್ಥಳಕ್ಕೆ ಭೇಟಿ ಕೊಟ್ಟೆ. ಅದಾಗಲೇ ಗುಜರಾತ್ ಸರ್ಕಾರವು ರಕ್ಷಣ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿತ್ತು. ಅದರೊಂದಿಗೆ ಕೇಂದ್ರ ಸರ್ಕಾರವು ತನ್ನ ಸಹಾಯ ಹಸ್ತ ಚಾಚಿತು. ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡೆವು. ಆ ಸಮಯಕ್ಕೆ ಏನೇನು ಬೇಕು ಅದೆಲ್ಲವನ್ನು ಮಾಡಲಾಯಿತು ಎಂದು ಸಚಿವ ರಾಮ್ ಮೋಹನ್ ನಾಯ್ಡು ಕಿಂಜಾರಪು ವಿವರಿಸಿದರು.
ವಿಮಾನದ ಬ್ಲ್ಯಾಕ್ ಬಾಕ್ಸ್ ಪತ್ತೆಯಾಗಿದೆ. ಅದನ್ನು ಈಗಾಗಲೇ ವಿಮಾನ ಅಪಘಾತದ ಹಿಂದಿನ ಕಾರಣಗಳನ್ನು ಪತ್ತೆ ಮಾಡುವ ತಂಡವು ಡಿಕೋಡಿಂಗ್ ಕಳುಹಿಸಿದೆ. ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ ಈ ಬಗ್ಗೆ ತನಿಖೆ ನಡೆಸಲಿದೆ. ಆದಷ್ಟು ಬೇಗ ವಿಮಾನ ಅಪಘಾತದ ಹಿಂದಿನ ಕಾರಣ ಹೊರಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಗೆ ಮುನ್ನ ಮಾಧ್ಯಮಗಳಿಗೆ ಮಾಹಿತಿ ಹಂಚಿಕೊಂಡ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಸಮೀರ್ ಕುಮಾರ್ ಸಿನ್ಹಾ, ವಿಮಾನದ ಕೊನೆಯ ಕರೆ ́ಮೇ ಡೇ ಆಗಿತ್ತು ಎಂದು ಹೇಳಿದ್ದಾರೆ.
ವಿಮಾನವು ಗುರುವಾರ ಮಧ್ಯಾಹ್ನ 1.38ಕ್ಕೆ ಅಹಮದಾಬಾದ್ ನಿಂದ ಲಂಡನ್ ಗೆ ಟೇಕಾಫ್ ಆಗಿತ್ತು. 1.39ಕ್ಕೆ ಟೇಕಾಫ್ ಆದ ತಕ್ಷಣ ವಿಮಾನದ ಪೈಲೆಟ್ ಎಟಿಸಿಯನ್ನು ಸಂಪರ್ಕಿಸಿದ್ದರು. ಆ ವೇಳೆ ಪೈಲೆಟ್ ಮೇ ಡೇ ಎಂದು ಘೋಷಿಸಿದ್ದರು. ಆದರೆ ಎಟಿಸಿ ನೀಡಿದ ಪ್ರತಿಕ್ರಿಯೆ ವಿಮಾನಕ್ಕೆ ತಲುಪಿರಲಿಲ್ಲ ಎಂದು ಅವರು ವಿಷಾದಿಸಿದರು.
ಆದರೆ ವಿಶೇಷವೆಂದರೆ ದುರಂತಕ್ಕೆ ಮುನ್ನ ವಿಮಾನವು ಪ್ಯಾರಿಸ್ ದಿಲ್ಲಿ ಅಹಮದಾಬಾದ್ ಮಾರ್ಗವನ್ನು ಯಾವುದೇ ತೊಂದರೆ ಇಲ್ಲದೆ ಪೂರ್ತಿಗೊಳಿಸಿತ್ತು ಎಂದು ಸಮೀರ್ ಕುಮಾರ್ ಸಿನ್ಹಾ ಉಲ್ಲೇಖಿಸಿದರು.
ಕೇಂದ್ರ ಸಚಿವರು ಪತ್ರಿಕಾಗೋಷ್ಠಿಯಲ್ಲಿ ಯಾವುದೇ ಮಾಧ್ಯಮದ ಪ್ರಶ್ನೆಗಳಿಗೆ ಉತ್ತರಿಸಿದೇ ನಿರ್ಗಮಿಸಿದರು.