ದಿಲ್ಲಿ | ತಿರುಪತಿಯಿಂದ ಕಳ್ಳಸಾಗಣೆಯಾಗಿದ್ದ10 ಟನ್ ರಕ್ತ ಚಂದನ ವಶ, ಇಬ್ಬರ ಬಂಧನ
Photo Credit : PTI
ಹೊಸದಿಲ್ಲಿ,ಅ.7: ಆರು ಕೋಟಿ ರೂ.ಮೌಲ್ಯದ 10 ಟನ್ ರಕ್ತಚಂದನವನ್ನು ವಶಪಡಿಸಿಕೊಂಡಿರುವ ದಿಲ್ಲಿ ಪೋಲಿಸರು ಅಂತಾರಾಷ್ಟ್ರೀಯ ಸಂಪರ್ಕವುಳ್ಳ ಇಬ್ಬರು ಕಳ್ಳಸಾಗಣೆದಾರರನ್ನು ಬಂಧಿಸಿದ್ದಾರೆ.
ಚೀನಾ ಮತ್ತು ಇತರ ದಕ್ಷಿಣ ಏಷ್ಯಾ ದೇಶಗಳಿಗೆ ಅಕ್ರಮವಾಗಿ ರಫ್ತು ಮಾಡಲು ರಕ್ತಚಂದನವನ್ನು ಆಂಧ್ರಪ್ರದೇಶದ ತಿರುಪತಿಯಿಂದ ಕಳ್ಳಸಾಗಣೆ ಮಾಡಲಾಗಿತ್ತು ಎಂದು ಡಿಸಿಪಿ ಹೇಮಂತ ತಿವಾರಿ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಗಸ್ಟ್‌ನಲ್ಲಿ ತಿರುಪತಿಯಿಂದ ಕಳ್ಳತನ ಮಾಡಲಾಗಿದ್ದ ರಕ್ತಚಂದನ ದಿಮ್ಮಿಗಳ ಸಾಗಾಣಿಕೆಯ ಕುರಿತು ಆಂಧ್ರಪ್ರದೇಶ ಪೋಲಿಸರು ಹಂಚಿಕೊಂಡಿದ್ದ ಗುಪ್ತಚರ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ಕಳ್ಳತನಕ್ಕೆ ಸಂಬಂಧಿಸಿದಂತೆ ತಿರುಪತಿಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ವಿಚಾರಣೆಯ ಸಂದರ್ಭದಲ್ಲಿ, ಕದ್ದ ದಿಮ್ಮಿಗಳನ್ನು ದಿಲ್ಲಿಗೆ ಸಾಗಿಸಲಾಗಿದೆ ಎಂದು ಆಂಧ್ರ ಪ್ರದೇಶ ಪೋಲಿಸರು ಬಂಧಿಸಿದ್ದ ಕೆಲವು ಆರೋಪಿಗಳು ಬಾಯ್ಬಿಟ್ಟಿದ್ದರು. ಮಾಹಿತಿಯ ಆಧಾರದಲ್ಲಿ ದಿಲ್ಲಿ ಪೋಲಿಸ್‌ನ ಎಸ್‌ಟಿಎಫ್ ಮತ್ತು ಆಂಧ್ರಪ್ರದೇಶ ಗುಪ್ತಚರ ಘಟಕದ ಜಂಟಿ ತಂಡವು ಸೋಮವಾರ ಬೆಳಿಗ್ಗೆ ತುಘ್ಲಕಾಬಾದ್‌ನಲ್ಲಿಯ ಗೋದಾಮೊಂದರ ಮೇಲೆ ದಾಳಿ ನಡೆಸಿ 9,500 ಕೆ.ಜಿ.ರಕ್ತಚಂದನ ದಿಮ್ಮಿಗಳನ್ನು ವಶಪಡಿಸಿಕೊಂಡಿದೆ. ಹೈದರಾಬಾದ್‌ನ ಇರ್ಫಾನ್ ಮತ್ತು ಮಹಾರಾಷ್ಟ್ರದ ಥಾನೆಯ ಅಮಿತ ಸಂಪತ್ ಪವಾರ್ ಎನ್ನುವವರನ್ನು ಬಂಧಿಸಲಾಗಿದೆ. ಈ ಇಬ್ಬರು ಆರೋಪಿಗಳು ಆಗಸ್ಟ್ ಮೊದಲ ವಾರದಲ್ಲಿ ಆಂಧ್ರಪ್ರದೇಶದಲ್ಲಿ ರಕ್ತಚಂದನ ದಿಮ್ಮಿಗಳನ್ನು ಪಡೆದುಕೊಂಡು ಟ್ರಕ್‌ಗಳಲ್ಲಿ ಅಡಗಿಸಿ ದಿಲ್ಲಿಗೆ ಸಾಗಿಸಿದ್ದರು ಎಂದು ತಿವಾರಿ ವಿವರಿಸಿದರು.
ತನ್ನ ಔಷಧೀಯ ಮತ್ತು ವಾಣಿಜ್ಯಿಕ ಮೌಲ್ಯದಿಂದಾಗಿ ರಕ್ತಚಂದನಕ್ಕೆ ಅತ್ಯಂತ ಹೆಚ್ಚಿನ ಬೆಲೆ ದೊರಕುವ ವಿದೇಶಿ ಮರುಕಟ್ಟೆಗಳಿಗೆ, ವಿಶೇಷವಾಗಿ ಚೀನಾ ಮತ್ತು ಇತರ ದಕ್ಷಿಣ ಏಶ್ಯಾ ದೇಶಗಳಿಗೆ ಕಳ್ಳಸಾಗಣೆ ಮಾಡಲು ಆರೋಪಿಗಳು ಹವಣಿಸಿದ್ದರು ಎಂದರು.
ಈ ಕಳ್ಳಸಾಗಣೆ ಕಾಲದ ಇತರರನ್ನು ಗುರುತಿಸಲು ಮತ್ತು ಇಡೀ ದಂಧೆಯ ಆರ್ಥಿಕ ಜಾಡು ಪತ್ತೆ ಹಚ್ಚಲು ತನಿಖೆಯು ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದರು.