ವಿಮಾನ ಅಪಘಾತದ ಬೆನ್ನಲ್ಲೇ ಕುಸಿದ ಬೋಯಿಂಗ್ ಶೇರು
PC : PTI
ಹೊಸದಿಲ್ಲಿ: ಗುರುವಾರ ಲಂಡನ್ ಗೆ ತೆರಳಲು ಅಹ್ಮದಾಬಾದ್ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿದ್ದ ಏರ್ ಇಂಡಿಯಾದ ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವು ಕೆಲವೇ ಕ್ಷಣಗಳಲ್ಲಿ ಪತನಗೊಂಡ ಹಿನ್ನೆಲೆಯಲ್ಲಿ ಗುರುವಾರ ಅಮೆರಿಕದ ಶೇರು ಮಾರುಕಟ್ಟೆಯಲ್ಲಿ ಬೋಯಿಂಗ್ ಕಂಪೆನಿಯ ಶೇರುಗಳ ಬೆಲೆ ಶೇ.5ಕ್ಕೂ ಅಧಿಕ ಕುಸಿದಿದೆ. ಪ್ರಿ ಮಾರ್ಕೆಟ್ ಅವಧಿಯಲ್ಲಿ ಶೇರು 17.50 ಡಾಲರ್ ಅಥವಾ ಶೇ.8.18ರಷ್ಟು ಕುಸಿದು 196.50 ಡಾಲರ್ ಗೆ ಇಳಿದಿತ್ತು.
ಬೋಯಿಂಗ್ 787-8 ಡ್ರೀಮ್ ಲೈನರ್ ವಿಮಾನವು ಅವಳಿ ಇಂಜಿನ್ ಗಳೊಂದಿಗೆ ಅಗಲವಾದ ಬಾಡಿ ವಿನ್ಯಾಸವನ್ನು ಹೊಂದಿದೆ. ಫ್ಲೈಟ್ ರಾಡಾರ್ 24ರ ಮಾಹಿತಿಯಂತೆ 2009ರಲ್ಲಿ ಬಿಡುಗಡೆಗೊಂಡಾಗಿನಿಂದ ಕಂಪೆನಿಯು ವಿಶ್ವಾದ್ಯಂತ ವಾಯುಯಾನ ಸಂಸ್ಥೆಗಳಿಗೆ 1,000ಕ್ಕೂ ಅಧಿಕ ಡ್ರೀಮ್ ಲೈನರ್ ವಿಮಾನಗಳನ್ನು ಮಾರಾಟ ಮಾಡಿದೆ.
ಲಯನ್ ಏರ್‌ಗೆ ಸೇರಿದ ಬೋಯಿಂಗ್ 737 ಮ್ಯಾಕ್ಸ್ 8 ವಿಮಾನವು ಇಂಡೋನೇಷ್ಯಾ ಬಳಿಯ ಜಾವಾ ಸಮುದ್ರದಲ್ಲಿ ಪತನಗೊಂಡ ಬಳಿಕ ಅಕ್ಟೋಬರ್ 2018ರಿಂದ ತೀವ್ರ ಆರ್ಥಿಕ ಮುಗ್ಗಟ್ಟು ಮತ್ತು ನಿಯಂತ್ರಕ ಸಮಸ್ಯೆಗಳನ್ನು ಎದುರಿಸುತ್ತಿರುವ ಬೋಯಿಂಗ್ ಕಂಪೆನಿಗೆ ಇಂದಿನ ಅಪಘಾತವು ಇನ್ನೊಂದು ದೊಡ್ಡ ಪೆಟ್ಟು ನೀಡಿದೆ. ಅಂದಿನ ಅಪಘಾತದಲ್ಲಿ ವಿಮಾನದಲ್ಲಿದ್ದ ಎಲ್ಲ 189 ಜನರು ಸಾವನ್ನಪ್ಪಿದ್ದರು.
ಮಾರ್ಚ್ 2019ರಲ್ಲಿ ಇಥಿಯೋಪಿಯನ್ ಏರ್‌ಲೈನ್ಸ್ ಗೆ ಸೇರಿದ ಇನ್ನೊಂದು 737 ಮ್ಯಾಕ್ಸ್ 8 ವಿಮಾನವು ಇಥಿಯೋಪಿಯಾದ ಅಡಿಸ್ ಅಬಾಬಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು 157 ಪ್ರಯಾಣಿಕರು ಮತ್ತು ಸಿಬ್ಬಂದಿ ಮೃತಪಟ್ಟಿದ್ದರು.
ಈ ನಡುವೆ ಏರ್ ಇಂಡಿಯಾದ ಮುಖ್ಯಸ್ಥ ನಟರಾಜನ್ ಚಂದ್ರಶೇಖರನ್ ಅವರು ಅಪಘಾತದಲ್ಲಿ ಸಂತ್ರಸ್ತರು ಮತ್ತು ಮೃತರ ಕುಟುಂಬಗಳಿಗೆ ನೆರವು ಒದಗಿಸುವುದು ತಮ್ಮ ತಕ್ಷಣದ ಆದ್ಯತೆಯಾಗಿದೆ ಎಂದು ಹೇಳಿದ್ದಾರೆ.
ಇತ್ತ ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಅಗ್ಗದ ದರದ ವಿಮಾನಯಾನ ಸಂಸ್ಥೆಗಳಾದ ಇಂಟರ್‌ಗ್ಲೋಬ್ ಏವಿಯೇಷನ್ ಮತ್ತು ಸ್ಪೈಸ್ ಜೆಟ್ ಶೇರುಗಳೂ ಅನುಕ್ರಮವಾಗಿ ಶೇ.3.32 ಮತ್ತು ಶೇ.1.78 ಕುಸಿತವನ್ನು ದಾಖಲಿಸಿವೆ. ಬಿಎಸ್‌ಇ ಸೂಚ್ಯಂಕ ಸೆನ್ಸೆಕ್ಸ್ 833.16(ಶೇ.1) ಮತ್ತು ಎನ್‌ಎಸ್‌ಇ ಸೂಚ್ಯಂಕ ನಿಫ್ಟಿ 50 253.20(ಶೇ.1.01) ಅಂಶಗಳ ನಷ್ಟದೊಂದಿಗೆ ಮುಕ್ತಾಯಗೊಂಡಿವೆ.