2006 ಮುಂಬೈ ರೈಲು ಸ್ಫೋಟ ಪ್ರಕರಣ | ಆರೋಪಿಗೆ ಚಿತ್ರಹಿಂಸೆ ನೀಡಿದ್ದು ಅನಾಗರಿಕ, ಅಮಾನವೀಯ: ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ | PTI
ಮುಂಬೈ: 2006ರ ಮುಂಬೈ ರೈಲು ಸ್ಫೋಟ ಪ್ರಕರಣದ ನಂ.1 ಆರೋಪಿಗೆ ನೀಡಿದ್ದ ಚಿತ್ರಹಿಂಸೆಯನ್ನು ಅನಾಗರಿಕ ಮತ್ತು ಅಮಾನವೀಯ ಎಂದು ಬಣ್ಣಿಸಿರುವ ಬಾಂಬೆ ಉಚ್ಚ ನ್ಯಾಯಾಲಯವು, ಇತರ ಆರೋಪಿಗಳ ದೂರುಗಳೂ ಸಹ ಚಿತ್ರಹಿಂಸೆಯನ್ನು ನೀಡಲಾಗಿತ್ತು ಎಂಬ ಅನುಮಾನಗಳನ್ನು ಹುಟ್ಟುಹಾಕಿವೆ ಎಂದು ಹೇಳಿದೆ. ರಾಜ್ಯ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್)ವು ಆರೋಪಿಗಳಿಂದ ಪಡೆದುಕೊಂಡಿದ್ದ ತಪ್ಪೊಪ್ಪಿಗೆ ಹೇಳಿಕೆಗಳನ್ನು ವಿಶ್ವಾಸಾರ್ಹವಲ್ಲ ಮತ್ತು ಸ್ವೀಕಾರಾರ್ಹವಲ್ಲ ಎಂದು ತಳ್ಳಿಹಾಕಿದ ನ್ಯಾಯಾಲಯ, ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿದೆ.
ಆರೋಪಿಯಿಂದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಪಡೆಯಲು ಪೋಲಿಸರಿಂದ ಚಿತ್ರಹಿಂಸೆಯ ದೂರುಗಳನ್ನು ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವಿವರಿಸಿದೆ. ಕಾಲುಗಳನ್ನು 180 ಡಿಗ್ರಿ ಅಗಲೀಕರಿಸುವುದು, ರಾತ್ರಿಯಿಡೀ ಆರೋಪಿಗಳನ್ನು ಕುರ್ಚಿಗೆ ಕಟ್ಟಿಹಾಕುವುದು, ಬೆಳಿಗ್ಗೆಯಿಂದ ಸಂಜೆಯವರೆಗೆ ಆಹಾರ ನಿರಾಕರಣೆ, ಸಾಕಷ್ಟು ಹೊಡೆತಗಳ ನಡುವೆ ಬನಿಯನ್‌ಗಳಲ್ಲಿ ಜಿರಳೆಗಳು ಮತ್ತು ಅಂಡರ್‌ವೇರ್‌ಗಳಲ್ಲಿ ಇಲಿಗಳನ್ನು ಬಿಡುವುದು ಆಪಾದಿತ ಚಿತ್ರಹಿಂಸೆ ವಿಧಾನಗಳಲ್ಲಿ ಸೇರಿವೆ.
ದಶಕದ ಹಿಂದೆ ವಿಶೇಷ ನ್ಯಾಯಾಲಯದಿಂದ ಗಲ್ಲುಶಿಕ್ಷೆಗೆ ಗುರಿಯಾಗಿದ್ದ ಐವರು ಮತ್ತು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಏಳು ಜನರು ಸೇರಿದಂತೆ ಎಲ್ಲ 12 ಆರೋಪಿಗಳನ್ನು ನ್ಯಾಯಮೂರ್ತಿಗಳಾದ ಅನಿಲ್ ಕಿಲೋರ್ ಮತ್ತು ಶ್ಯಾಮ ಚಂದಕ್ ಅವರ ಪೀಠವು ಖುಲಾಸೆಗೊಳಿಸಿತು. ಬೆದರಿಕೆಗಳ ಮೂಲಕ ಪಡೆದುಕೊಂಡಿದ್ದ ತಪ್ಪೊಪ್ಪಿಗೆ ಹೇಳಿಕೆಗಳನ್ನು ಅಮಾನ್ಯಗೊಳಿಸಲು ಎರಡು ಶತಮಾನಗಳಷ್ಟು ಹಳೆಯ ಇತಿಹಾಸವನ್ನು ಉಲ್ಲೇಖಿಸಿದ ಪೀಠವು, 1817ರಿಂದಲೂ ಪೋಲಿಸ್ ದೌರ್ಜನ್ಯಗಳ ಪುರಾವೆಗಳನ್ನು ನಾವು ಪಡೆಯಬಹುದು. 1817ರಲ್ಲಿ ಬಂಗಾಳ ಪೋಲಿಸ್ ನಿಯಂತ್ರಣ ಕಾಯ್ದೆಯ ಅಂಗೀಕಾರವು ಒಂದು ನಿದರ್ಶನವಾಗಿದೆ. ಎರಡು ಶತಮಾನಗಳಿಗೂ ಅಧಿಕ ಕಾಲ ಪೋಲಿಸ್ ಅಧಿಕಾರಿಗಳ ದೌರ್ಜನ್ಯಗಳ ಮೇಲೆ ಸುರಕ್ಷತಾ ಕ್ರಮಗಳು ಮತ್ತು ತಪಾಸಣೆಗಳ ಮೂಲಕ ನಿಗಾಯಿರಿಸಲು ಪ್ರಯತ್ನಿಸಲಾಗಿತ್ತು ಎನ್ನುವುದನ್ನು ಇದು ತೋರಿಸುತ್ತಿದೆ ಎಂದು ಹೇಳಿತು.
ಆರೋಪಿಗಳು 60 ದಿನಗಳಿಗೂ ಹೆಚ್ಚಿನ ಸಮಯ ಕಸ್ಟಡಿಯಲ್ಲಿದ್ದರೂ, ಅವರು ತನಿಖೆಗೆ ಸಹಕರಿಸಿಲ್ಲ ಎಂದು ಪೋಲಿಸರು ದೂರಿದ್ದರು. ಆದರೆ ಸೆ.24,2006ರಂದು ಆರೋಪಿಗಳ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಎಮ್‌ಕೋಕಾ)ವನ್ನು ಹೇರಿದ ಕೂಡಲೇ 11 ತಪ್ಪೊಪ್ಪಿಗೆಗಳು ಹೊರಬಿದ್ದಿದ್ದು, ಅವು ಸ್ವಯಂಪ್ರೇರಿತವಾಗಿರಲಿಲ್ಲ, ಪೋಲಿಸ್ ಕಸ್ಟಡಿಯಲ್ಲಿ ನಿರಂತರ ಚಿತ್ರಹಿಂಸೆಯ ಮೂಲಕ ಅವುಗಳನ್ನು ಪಡೆಯಲಾಗಿತ್ತು ಎನ್ನುವುದನ್ನು ಇದು ತೋರಿಸಿದೆ ಎಂದು ಆರೋಪಿಗಳ ಪರ ವಕೀಲ ಯುಗ್ ಚೌಧರಿ ವಾದಿಸಿದರು.
ಅ.9,2006ರಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ಅವರೆಲ್ಲರೂ ತಮ್ಮ ತಪ್ಪೊಪ್ಪಿಗೆಗಳನ್ನು ಹಿಂದೆಗೆದುಕೊಂಡಿದ್ದರು ಮತ್ತು ಎಟಿಎಸ್ ನೀಡಿದ್ದ ಚಿತ್ರಹಿಂಸೆಗಳನ್ನು ವಿವರಿಸಿದ್ದರು ಎಂದೂ ಚೌಧರಿ ವಾದಿಸಿದರು.
2021ರಲ್ಲಿ ಜೈಲಿನಲ್ಲಿ ಮೃತಪಟ್ಟಿದ್ದ ಆರೋಪಿ ನಂ.1 ಕಮಾಲ್ ಅನ್ಸಾರಿ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿದಿರಲಿಲ್ಲ. ‘ನಾನು ನಿನ್ನನ್ನು ಕೊಲ್ಲುವುದಿಲ್ಲ. ನನ್ನ ಬಳಿ ಪೆನ್ ಇದೆ ಮತ್ತು ಈ ಪೆನ್ನಿನ ಮೂಲಕ ನಾನು ನಿನ್ನ ಜೀವನವನ್ನು ನರಕವಾಗಿಸತ್ತೇನೆ, ನಿನ್ನ ಇಡೀ ಕುಟುಂಬ ಬೀದಿಗೆ ಬೀಳುತ್ತದೆ’ ಎಂದು ಡಿಸಿಪಿ ತನಗೆ ಬೆದರಿಕೆಯೊಡ್ಡಿದ್ದರು ಎಂದು ಆರೋಪಿಸಿ ಆತ ಸಲ್ಲಿಸಿದ್ದ ದೂರನ್ನು ಉಚ್ಚ ನ್ಯಾಯಾಲಯವು ವಿವರವಾಗಿ ಗಮನಕ್ಕೆ ತೆಗೆದುಕೊಂಡಿತು.