ರಸ್ತೆ ಗುಂಡಿ, ಮ್ಯಾನ್‌ಹೋಲ್ ಅವಘಡದ ಸಾವುಗಳಿಗೆ 6 ಲಕ್ಷ ರೂ. ಪರಿಹಾರ ನೀಡಿ: ನಗರಪಾಲಿಕೆಗಳಿಗೆ ಬಾಂಬೆ ಹೈಕೋರ್ಟ್ ಆದೇಶ
►ಗುತ್ತಿಗೆದಾರರನ್ನೂ ಹೊಣೆ ಮಾಡುವಂತೆ ಸೂಚನೆ ►ಉತ್ತಮ, ಸುರಕ್ಷಿತ ರಸ್ತೆಗಳನ್ನು ಹೊಂದುವುದು ಪೌರರ ಹಕ್ಕು ಎಂದ ನ್ಯಾಯಾಲಯ
ಸಾಂದರ್ಭಿಕ ಚಿತ್ರ | Photo Credi : PTI
ಮುಂಬೈ: ರಸ್ತೆಗುಂಡಿಗಳು ಹಾಗೂ ತೆರೆದ ಮ್ಯಾನ್‌ಹೋಲ್‌ಗಳಿಂದಾಗಿ ಸಂಭವಿಸುವ ಸಾವುಗಳಿಗೆ 6 ಲಕ್ಷ ರೂ. ಮತ್ತು ಗಾಯಾಳುಗಳಿಗೆ 50 ಸಾವಿರ ರೂ.ಗಳಿಂದ 2.5 ಲಕ್ಷ ರೂ.ವರೆಗೆ ಪರಿಹಾರ ನೀಡಬೇಕೆಂದು ಬಾಂಬೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರದ ಮಹಾನಗರಪಾಲಿಕೆ ಹಾಗೂ ಇತರ ಆಡಳಿತ ಪ್ರಾಧಿಕಾರಗಳಿಗೆ ಮಂಗಳವಾರ ಆದೇಶಿಸಿದೆ.
ಪೌರರು ಹೊಂಡಗಳಿಂದ ಮುಕ್ತವಾದ ಸುರಕ್ಷಿತ ರಸ್ತೆಗಳನ್ನು ಹೊಂದುವುದು ಪೌರರ ಹಕ್ಕಾಗಿದೆ. ಅವುಗಳನ್ನು ನಿರಾಕರಿಸುವುದು ಭಾರತೀಯ ಸಂವಿಧಾನದ 21ನೇ ವಿಧಿಯು ಪ್ರತಿಪಾದಿಸುವ ಬದುಕುವ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ರೇವತಿ ಮೋಹಿತ್ ದೆರೆ ಹಾಗೂ ಸಂದೇಶ್ ಪಾಟೀಲ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.
ಮಹಾರಾಷ್ಟ್ರದ ಮುಂಬೈ, ಥಾಣೆ ಹಾಗೂ ಭಿವಂಡಿ ನಗರಗಳಲ್ಲಿ ರಸ್ತೆಗುಂಡಿಗಳಿಂದಾಗಿ ನಾಗರಿಕರು ಸಾವನ್ನಪ್ಪಿರುವ ಬಗ್ಗೆ ತಮಗೆ ಮಾಹಿತಿ ದೊರೆತಿದೆ. ಆದರೆ ಅಧಿಕಾರಿಗಳು ಮಾಮೂಲಿನಂತೆ ಒಬ್ಬರನ್ನೊಬ್ಬರನ್ನು ದೂರುವ ಮೂಲಕ ತಮ್ಮ ಹೊಣೆಗಾರಿಕೆಯಿಂದ ಜಾರಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ ಎಂದು ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.
ರಸ್ತೆ ಸುರಕ್ಷತೆಗೆ ಸಂಬಂಧಿಸಿ ನ್ಯಾಯಾಲಯವು ಹಲವಾರು ನಿರ್ದೇಶನಗಳನ್ನು ನೀಡಿದ್ದರೂ, ಎಲ್ಲಾ ಏಜೆನ್ಸಿಗಳನ್ನು ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯ ನಿಂಯತ್ರಣಕ್ಕೆ ತರುವುದಾಗಿ ರಾಜ್ಯ ಸರಕಾರ ಭರವಸೆ ನೀಡಿದೆ. ಆದಾಗ್ಯೂ ಈವರೆಗೆ ಅಂತಹ ಯಾವುದೇ ಪ್ರಕ್ರಿಯೆಯನ್ನು ಮೂರ್ತರೂಪಕ್ಕೆ ತಂದಿರುವುದು ಕಂಡುಬಂದಿಲ್ಲ. ಮಳೆಗಾಲದಲ್ಲಿ ರಸ್ತೆ ಹೊಂಡಗಳು ಹಾಗೂ ತೆರೆದ ಮ್ಯಾನ್‌ಹೋಲ್‌ಗಳಿಂದಾಗಿ ಸಂಭವಿಸುವ ಅವಘಡಗಳಲ್ಲಿ ಜನರು ಸಾವನ್ನಪ್ಪುತ್ತಿರುವುದು ಅಥವಾ ಗಾಯಗೊಳ್ಳುವ ಘಟನೆಗಳು ವರದಿಯಾಗುವುದು ಸಾಮಾನ್ಯ ವಿಷಯವಾಗಿ ಬಿಟ್ಟಿದೆ ಎಂದು ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ.
ಇಂತಹ ಸಾವುಗಳು ಹಾಗೂ ಗಾಯ ಪ್ರಕರಣಗಳಿಗೆ ಪೌರಾಡಳಿತ ಇಲಾಖೆಗಳು, ರಸ್ತೆ ನಿರ್ವಹಣೆಯನ್ನು ವಹಿಸಿಕೊಂಡಿರುವ ಕಂಟ್ರಾಕ್ಟರ್‌ಗಳನ್ನು ಹೊಣೆಗಾರರನ್ನಾಗಿಸಲು ಇದು ಸಕಾಲವಾಗಿದೆ ಎಂದವರು ಹೇಳಿದರು.
ಈ ಸಮಸ್ಯೆಗೆ ಸ್ಪಂದಿಸಲು ಸಂಬಂಧಪಟ್ಟ ಇಲಾಖೆಗಳು ಗಂಭೀರವಾದ ನಿಲುವನ್ನು ತಳೆದಿರುವುದು ನ್ಯಾಯಾಲಯಕ್ಕೆ ಕಂಡುಬಂದಿಲ್ಲವೆಂದು ನ್ಯಾಯಪೀಠ ಹೇಳಿದೆ. ಇಂತಹ ರಸ್ತೆ ದುರಂತಗಳಿಗೆ ಗುತ್ತಿಗೆದಾರರು ಮಾತ್ರವಲ್ಲ ಪೌರಾಡಳಿತ ಇಲಾಖೆಗಳನ್ನೂ ಹೊಣೆಯಾಗಿಸಬೇಕು ಎಂದು ನ್ಯಾಯಾಧೀಶರು ಆದೇಶದಲ್ಲಿ ತಿಳಿಸಿದ್ದಾರೆ.
ನ್ಯಾಯಾಲಯ ಹೇಳಿದ್ದೇನು?:
► ಮುಂಬೈಯಲ್ಲಿ ಹಲವು ದಶಕಗಳ ಹಿಂದೆ ನಿರ್ಮಾಣಗೊಂಡ ಕೆಲವು ರಸ್ತೆಗಳು ಈಗಲೂ ಉತ್ತಮ ಸ್ಥಿತಿಯಲ್ಲಿವೆ. ಆದರೆ, ನೂತನವಾಗಿ ನಿರ್ಮಾಣಗೊಂಡ ರಸ್ತೆಗಳಲ್ಲಿ ಮಳೆಗಾಲ ಪ್ರಾರಂಭವಾಗುತ್ತಿದ್ದಂತೆ ಕೆಲವೇ ದಿನಗಳಲ್ಲಿ ಹೊಂಡಗಳು ಕಾಣಿಸಿಕೊಳ್ಳುತ್ತವೆ.
► ಕಾಮಗಾರಿಗಳಿಗೆ ಬಳಸುವ ಕಳಪೆ ದರ್ಜೆಯ ಸಾಮಾಗ್ರಿಗಳು, ರಸ್ತೆ ನಿರ್ಮಾಣದಲ್ಲಿ ಗುಣಮಟ್ಟದ ಕೊರತೆ ಇದಕ್ಕೆ ಕಾರಣವಾಗಿದೆ. ಇಂತಹ ಕಳಪೆ ಕಾಮಗಾರಿಗಳಿಗೆ ಕೆಲವು ನಗರಪಾಲಿಕೆಗಳು ಗುತ್ತಿಗೆದಾರರಿಗೆ ದಂಡವನ್ನು ವಿಧಿಸಿವೆಯಾದರೂ, ಅಂತಹ ಕ್ರಮಗಳಿಂದ ಸಮಸ್ಯೆ ಬಗೆಹರಿದಿಲ್ಲ.
► ರಸ್ತೆಗುಂಡಿಗೆ ಸಂಭವಿಸಿದ ಸಾವುಗಳು ಹಾಗೂ ಗಾಯಗಳಿಗೆ ಸಂಬಂಧಪಟ್ಟವರನ್ನು ವೈಯಕ್ತಿಕವಾಗಿ ಹೊಣೆಗಾರರನ್ನಾಗಿ ಮಾಡುವವರೆಗೆ ಹಾಗೂ ಅವರು ತಮ್ಮದೇ ಕಿಸೆಯಿಂದ ಹಣವನ್ನು ದಂಡವಾಗಿ ಪಾವತಿಸುವವರೆಗೆ ಅವರಿಗೆ ಪರಿಸ್ಥಿತಿಯ ತೀವ್ರತೆ ಅರಿವಾಗದು.
► ಟೋಲ್ ಶುಲ್ಕ ಮತ್ತಿತರ ಕಂದಾಯಗಳಿಂದ ಕೋಟ್ಯಂತರ ರೂ. ಸಂಗ್ರಹಿಸಲಾಗುತ್ತಿದ್ದರೂ, ರಸ್ತೆಗಳ ಶೋಚನೀಯ ಸ್ಥಿತಿಯು ನಾಗರಿಕರ ಬಗೆಗೆ ಆಡಳಿತಕ್ಕೆ ಇರುವ ನಿರ್ಲಕ್ಷ್ಯವನ್ನು ಪ್ರತಿಬಿಂಬಿಸುತ್ತದೆ.
► ಯಾವ ರೀತಿಯಲ್ಲಿ ರಸ್ತೆಗಳ ನಿರ್ಮಾಣ ಹಾಗೂ ನಿರ್ವಹಣೆಯನ್ನು ನಡೆಸಬೇಕೆಂದರೆ, ಕನಿಷ್ಠ ಐದರಿಂದ ಹತ್ತು ವರ್ಷಗಳವರೆಗೆ ಅವುಗಳ ರಿಪೇರಿ ಅಗತ್ಯಬಾರದಂತೆ ಇರಬೇಕು.