ಪಶ್ಚಿಮ ಬಂಗಾಳ | ಮೊಬೈಲ್ ಕಳ್ಳತನದ ಶಂಕೆಯಲ್ಲಿ ಬಾಲಕನನ್ನು ತಲೆಕೆಳಗಾಗಿ ನೇತುಹಾಕಿ ವಿದ್ಯುತ್ ಶಾಕ್ ಕೊಟ್ಟ ದುಷ್ಕರ್ಮಿಗಳು
ಸಾಂದರ್ಭಿಕ ಚಿತ್ರ (credit: Grok)
ಕೋಲ್ಕತ್ತಾ: ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಕಾರ್ಖಾನೆಯೊಂದರಲ್ಲಿ 14ರ ಹರೆಯದ ಬಾಲಕನನ್ನು ಮೊಬೈಲ್ ಫೋನ್ ಕಳ್ಳತನದ ಶಂಕೆಯಲ್ಲಿ ತಲೆಕೆಳಗಾಗಿ ನೇತುಹಾಕಿ, ಥಳಿಸಿ, ವಿದ್ಯುತ್ ಶಾಕ್ ನೀಡಿರುವ ಆರೋಪ ಕೇಳಿ ಬಂದಿದೆ.
ಕೋಲ್ಕತ್ತಾ ಬಳಿಯ ಮಹೇಶತಲಾ ಪ್ರದೇಶದಲ್ಲಿ ಘಟನೆ ನಡೆದಿದೆ. ದೌರ್ಜನ್ಯದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ʼಕಂಖುಲಿ ಪುರ್ಬಪಾರ ಪ್ರದೇಶದಲ್ಲಿರುವ ಕಾರ್ಖಾನೆಯಿಂದ ಬಾಲಕನನ್ನು ರಕ್ಷಿಸಲಾಗಿದೆ. ಕೃತ್ಯಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆʼ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊಬೈಲ್ ಫೋನ್ ಕಳ್ಳತನದ ಆರೋಪವನ್ನು ಬಾಲಕನ ಕುಟುಂಬ ನಿರಾಕರಿಸಿದೆ. ʼಯಾವುದೇ ಕಾರಣವಿಲ್ಲದೆ ಬಾಲಕನಿಗೆ ಥಳಿಸಿ ಚಿತ್ರಹಿಂಸೆ ನೀಡಲಾಗಿದೆ. ಈ ಕುರಿತು ನಾವು ದೂರು ದಾಖಲಿಸಿದ್ದೇವೆʼ ಎಂದು ಬಾಲಕನ ಕುಟುಂಬಸ್ಥರು ಹೇಳಿಕೊಂಡಿದ್ದಾರೆ.