WFI ಮುಖ್ಯಸ್ಥ ಬ್ರಿಜ್ ಭೂಷಣ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ; ದಿಲ್ಲಿ ಪೊಲೀಸರಿಂದ ಮುಕ್ತಾಯ ವರದಿ: ನ್ಯಾಯಾಲಯದಿಂದ ಅಂಗೀಕಾರ
ಬ್ರಿಜ್ ಭೂಷಣ್ | PTI
ಹೊಸದಿಲ್ಲಿ: ನಾನು ಅಪ್ರಾಪ್ತೆಯಾಗಿದ್ದಾಗ, ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ನನಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಮಹಿಳಾ ಕುಸ್ತಿ ಪಟುವೊಬ್ಬರು ದಾಖಲಿಸಿದ್ದ ಪ್ರಕರಣವನ್ನು ವಜಾಗೊಳಿಸುವಂತೆ ದಿಲ್ಲಿ ಪೊಲೀಸರು ಸಲ್ಲಿಸಿದ ಮುಕ್ತಾಯ ವರದಿಯನ್ನು ಸೋಮವಾರ ದಿಲ್ಲಿಯ ನ್ಯಾಯಾಲಯವೊಂದು ಅಂಗೀಕರಿಸಿದೆ.
ಈ ವರದಿಯನ್ನು ಅಂಗೀಕರಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶೆ ಗೋಮತಿ ಮನೋಚಾ, “ವಜಾಗೊಳಿಸಲು ಸಮ್ಮತಿಸಲಾಗಿದೆ” ಎಂದು ಹೇಳಿದ್ದಾರೆ.
ಈ ಹಿಂದೆ ಈ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರ ಚೇಂಬರ್ ನಲ್ಲಿ ಆಗಸ್ಟ್ 1, 2023ರಂದು ನಡೆದಿದ್ದ ವಿಚಾರಣೆಯ ಸಂದರ್ಭದಲ್ಲಿ, “ಈ ಪ್ರಕರಣದಲ್ಲಿ ದಿಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯ ಬಗ್ಗೆ ನಾನು ತೃಪ್ತಳಾಗಿದ್ದೇನೆ ಹಾಗೂ ಅವರು ಸಲ್ಲಿಸುವ ಮುಕ್ತಾಯ ವರದಿಯನ್ನು ನಾನು ವಿರೋಧಿಸುವುದಿಲ್ಲ” ಎಂದು ದೂರುದಾರೆ ಅಪ್ರಾಪ್ತ ಬಾಲಕಿ ಸ್ಪಷ್ಟಪಡಿಸಿದ್ದಳು.
ಈ ನಡುವೆ, ನನ್ನ ಪುತ್ರಿಗಾದ ಅನ್ಯಾಯಕ್ಕಾಗಿ, ಬ್ರಿಜ್ ಭೂಷಣ್ ಶರಣ್ ಸಿಂಗ್ ನನ್ನತ್ತ ಧಾವಿಸಲಿ ಎಂಬ ಕಾರಣಕ್ಕೆ ನಾನು ಅವರ ವಿರುದ್ಧ ಸುಳ್ಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದೆ ಎಂದು ಪ್ರಕರಣದ ವಿಚಾರಣೆಯ ಮಧ್ಯಭಾಗದಲ್ಲಿ ದೂರುದಾರ ಬಾಲಕಿಯ ತಂದೆ ಸ್ಫೋಟಕ ಹೇಳಿಕೆ ನೀಡಿದ್ದರು. ಇದರ ಬೆನ್ನಿಗೇ, ಜೂನ್ 15, 2023ರಂದು ಪ್ರಕರಣವನ್ನು ರದ್ದುಗೊಳಿಸುವಂತೆ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಮುಕ್ತಾಯ ವರದಿಯನ್ನು ಸಲ್ಲಿಸಿದ್ದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಪೋಕ್ಸೊ ಅಪರಾಧ ಕಾಯ್ದೆಯನ್ನು ಕೈಬಿಡುವಂತೆ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದರಾದರೂ, ಆರು ಮಹಿಳಾ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಹಾಗೂ ಅವರನ್ನು ಹಿಂಬಾಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಅವರ ವಿರುದ್ಧ ದಾಖಲಾಗಿರುವ ಪ್ರತ್ಯೇಕ ಪ್ರಕರಣದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಅಪ್ತಾಪ್ತ ಬಾಲಕಿಯನ್ನು ಒಳಗೊಂಡಿರುವ ದೂರಿನಲ್ಲಿ ಯಾವುದೇ ಸಮರ್ಥನೀಯ ಪುರಾವೆ ಇಲ್ಲದಿರುವುದರಿಂದ, ಸದರಿ ದೂರನ್ನು ವಜಾಗೊಳಿಸಬೇಕು ಎಂದು ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಶಿಫಾರಸು ಮಾಡಿದ್ದರು.
ಪೋಕ್ಸೊ ಕಾಯ್ದೆಯಡಿ ಕನಿಷ್ಠ ಮೂರು ವರ್ಷಗಳ ಸೆರೆವಾಸಕ್ಕೆ ಅವಕಾಶವಿದ್ದು, ಇದು ಯಾವ ಸೆಕ್ಷನ್ ಗಳಡಿ ಪ್ರಕರಣ ದಾಖಲಾಗಿದೆ ಎಂಬುದನ್ನು ಇದು ಅವಲಂಬಿಸಿದೆ.
ಆದರೆ, ತಮ್ಮ ವಿರುದ್ಧದ ಈ ಆರೋಪಗಳನ್ನು ಮಾಜಿ ಬಿಜೆಪಿ ಸಂಸದರೂ ಆದ ಬ್ರಿಜ್ ಭೂಷಣ್ ಶರಣ್ ಸಿಂಗ್ ಸತತವಾಗಿ ಅಲ್ಲಗಳೆದಿದ್ದರು.