×
Ad

ಬಿಆರ್‌ಎಸ್ ಪಕ್ಷ ಬಿಜೆಪಿಯ ‘ಬಿ’ ಟೀಮ್, ಎರಡೂ ಪಕ್ಷಗಳು ರಹಸ್ಯ ಒಪ್ಪಂದ ಮಾಡಿಕೊಂಡಿವೆ: ಖರ್ಗೆ

Update: 2023-10-29 22:19 IST

ಮಲ್ಲಿಕಾರ್ಜುನ ಖರ್ಗೆ Photo- PTI

ಹೊಸದಿಲ್ಲಿ: ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರಿದಲ್ಲಿ, ಅದು ನೀಡಿರುವ ಎಲ್ಲಾ ಆರೂ ಚುನಾವಣಾ ಗ್ಯಾರಂಟಿಗಳನ್ನು ಈಡೇರಿಸುವುದಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವಿವಾರ ಭರವಸೆ ನೀಡಿದ್ದಾರೆ. ಬಿಆರ್‌ಎಸ್ ಪಕ್ಷವು ಬಿಜೆಪಿಯ ಬಿ ಟೀಮ್ ಆಗಿದ್ದು, ಈ ಚುನಾವಣೆಯಲ್ಲಿ ಅವು ರಹಸ್ಯವಾಗಿ ಒಳಒಪ್ಪಂದ ಮಾಡಿಕೊಂಡಿವೆ ಎಂದವರು ಆಪಾದಿಸಿದ್ದಾರೆ.

ತೆಲಂಗಾಣ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸಂಗಾರೆಡ್ಡಿ ಕ್ಷೇತ್ರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು ತೆಲಂಗಾಣದಲ್ಲಿ ಕಾಂಗ್ರೆಸ್ ಘೋಷಿಸಿದ ಆರು ಚುನಾವಣಾ ಗ್ಯಾರಂಟಿಗಳ ಬಗ್ಗೆ ಮತದಾರರ ಗಮನಸೆಳೆದರು ಹಾಗೂ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವಂತೆ ಮನವಿ ಮಾಡಿದರು.

ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಖರ್ಗೆ ‘‘ ಕೆಸಿಆರ್ ತಮಗೆ ತೋಚಿದ ಹಾಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಂದ ವಿದ್ಯಾರ್ಥಿಗಳು, ಮಹಿಳೆಯರು ಅಥವಾ ರೈತರಿಗೇನಾದರೂ ಪ್ರಯೋಜನವಾಗಿದಯೇ ? ’’ಎಂದು ಪ್ರಶ್ನಿಸಿದರು. ಈ ಕಾರಣಕ್ಕಾಗಿಯೇ ಕಾಂಗ್ರೆಸ್ ಜನತೆಗೆ ಆರು ಗ್ಯಾರಂಟಿಗಳನ್ನು ನೀಡುತ್ತಿದೆ ಎಂದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳ ಅನುಷ್ಠಾನವಾಗುತ್ತಿರುವ ಬಗ್ಗೆ ಸಂದೇಹ ವ್ಯಕ್ತಪಡಿಸಿರುವ ಬಿಆರ್‌ಎಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡ ಖರ್ಗೆ, ‘‘ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಎ.ರೇವಂತ ರೆಡ್ಡಿ ಅವರು ಐಷಾರಾಮಿ ಬಸ್ಸೊಂದನ್ನು ಏರ್ಪಾಡು ಮಾಡಿ, ಬಿಆರ್‌ಎಸ್ ನಾಯಕರನ್ನು ಕರ್ನಾಟಕಕ್ಕೆ ಕರೆದೊಯ್ಯಲಿದ್ದಾರೆ ಹಾಗೂ ಚುನಾವಣಾ ಭರವಸೆಗಳನ್ನು ಅಲ್ಲಿ ರಾಜ್ಯಸರಕಾರ ಅನುಷ್ಠಾನಗೊಳಿಸಿರುವುದನ್ನು ಅವರಿಗೆ ತೋರಿಸಲಿದ್ದಾರೆ ಎಂದರು.

ಬಿಆರ್‌ಎಸ್ ಹಾಗೂ ಬಿಜೆಪಿ ಗುಪ್ತವಾಗಿ ಜೊತೆಯಾಗಿ ಕೆಲಸ ಮಾಡುತ್ತಿದೆ ಎಂದು ಆಪಾದಿಸಿದ ಖರ್ಗೆ, ಕಳೆದ 70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆಯೆಂದು ಬಿಜೆಪಿ ಹಾಗೂ ಮೋದಿ ಕೇಳುತ್ತಿದ್ದಾರೆ. ಆದರ ಬಿ ತಂಡವಾದ ಬಿಆರ್‌ಎಸ್ ಕೂಡಾ ಅದೇ ವಿಷಯವನ್ನು ಹೇಳುತ್ತಿದೆ. ಅವರೆಡೂ ರಹಸ್ಯ ಒಪ್ಪಂದ ಮಾಡಿಕೊಂಡಿವೆ ಹಾಗೂ ತಮಗೆ ಲಾಭವಾಗುವಂತಹ ಕೆಲಸಗಳನ್ನು ಮಾತ್ರವೇ ಅವು ಮಾಡುತ್ತಿವೆ ಎಂದು ಖರ್ಗೆ ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News