×
Ad

ಬುಜಭಲ್ ರಾಜೀನಾಮೆ ಅಂಗೀಕಾರಗೊಂಡಿಲ್ಲ : ಫಡ್ನವೀಸ್

Update: 2024-02-04 22:07 IST

ದೇವೇಂದ್ರ ಫಡ್ನವೀಸ್‌ | Photo : PTI

ಮುಂಬೈ : ಹಿರಿಯ ಒಬಿಸಿ ನಾಯಕ ಹಾಗೂ ಸಂಪುಟ ಸಚಿವ ಛಗನ್ ಭುಜಬಲ್ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು ಇಲ್ಲಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಈ ಬಗ್ಗೆ ಸ್ಪಷ್ಟನೆ ನೀಡಲು ಸಾಧ್ಯ ಎಂದರು.

ತಾನು ಕಳೆದ ವರ್ಷದ ನ.16ರಂದು ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ ಎಂದು ಶನಿವಾರ ತಿಳಿಸಿದ್ದ ಅಜಿತ್ ಪವಾರ್ ನೇತೃತ್ವದ ಎನ್ಸಿಪಿ ಬಣಕ್ಕೆ ಸೇರಿದ ಭುಜಬಲ್, ಮಹಾರಾಷ್ಟ್ರ ಸರಕಾರವು ಮರಾಠಾ ಸಮುದಾಯಕ್ಕೆ ಒಬಿಸಿ ಮೀಸಲಾತಿಯಲ್ಲಿ ಹಿಂಬಾಗಿಲ ಪ್ರವೇಶವನ್ನು ಕಲ್ಪಿಸುತ್ತಿದೆ ಎಂದು ಆರೋಪಿಸಿದ್ದರು. ಈ ಕುರಿತು ಮಾತನಾಡದಂತೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತನಗೆ ಸೂಚಿಸಿದ್ದರಿಂದ ಎರಡು ತಿಂಗಳಿಗೂ ಹೆಚ್ಚು ಕಾಲ ತಾನು ಈ ವಿಷಯವನ್ನು ಬಹಿರಂಗಗೊಳಿಸಿರಲಿಲ್ಲ ಎಂದೂ ಅವರು ಹೇಳಿದ್ದರು.

ಮರಾಠಾ ಸಮುದಾಯಕ್ಕೆ ಮೀಸಲಾತಿಗೆ ತಾನು ವಿರುದ್ಧವಾಗಿಲ್ಲ, ಆದರೆ ಈಗಿರುವ ಒಬಿಸಿ ಕೋಟಾವನ್ನು ಅದರೊಂದಿಗೆ ಹಂಚಿಕೊಳ್ಳುವುದಕ್ಕೆ ತಾನು ವಿರುದ್ಧವಾಗಿದ್ದೇನೆ ಎಂದು ಹೇಳಿದ್ದ ಭುಜಬಲ್, ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಮೀಕ್ಷೆಯ ಮೂಲಕ ಮರಾಠಾ ಸಮುದಾಯದ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ದತ್ತಾಂಶಗಳ ಸಂಗ್ರಹ ಪ್ರಕ್ರಿಯೆಯು ದೋಷಪೂರಿತವಾಗಿದೆ ಎಂದೂ ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News