ಈಜುಪಟು, ಪದ್ಮಶ್ರೀ ಪುರಸ್ಕೃತೆ ಬುಲಾಚೌಧುರಿಯ ಪದಕ, ಸ್ಮರಣಿಕೆಗಳನ್ನು ಅಪಹರಿಸಿದ ಚೋರರು
ಬುಲಾ ಚೌಧುರಿ | PC : X
ಹೊಸದಿಲ್ಲಿ, ಆ.16: ಪಶ್ಚಿಮಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿರುವ ತನ್ನ ಪೂರ್ವಿಕರ ಮನೆಯಲ್ಲಿರಿಸಲಾಗಿದ್ದ ತನ್ನ ಪದಕಗಳು ಹಾಗೂ ಸ್ಮರಣಿಕೆಗಳನ್ನು ಕಳ್ಳರು ಅಪಹರಿಸಿದ್ದಾರೆಂದು ಮಾಜಿ ಈಜುಪಟು ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬುಲಾ ಚೌಧುರಿ ಶನಿವಾರ ಆರೋಪಿಸಿದ್ದಾರೆ.
ಕಠಿಣ ಪರಿಶ್ರಮ ಹಾಗೂ ಸಮರ್ಪಣಾಭಾವದ ಮೂಲಕ ತನ್ನ ಕ್ರೀಡಾಬದುಕಿನಲ್ಲಿ ‘ಸಂಪಾದಿಸಿದ್ದೆಲ್ಲವನ್ನೂ ’ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ದಕ್ಷಿಣ ಏಶ್ಯಾ ಫೆಡರೇಶನ್ (ಎಸ್‌ಎಎಫ್) ಕ್ರೀಡಾಕೂಟಗಳಲ್ಲಿ ತಾನು ಗೆದ್ದ ಪದಕಗಳು ಹಾಗೂ ಪದ್ಮಶ್ರೀ ಪ್ರಶಸ್ತಿಯನ್ನು ಕಳವುಗೈಯಲಾಗಿದೆ ಎಂದು ಆಕೆ ನೋವು ತೋಡಿಕೊಂಡಿದ್ದಾರೆ.
ಕಳ್ಳರು ಹಲವಾರು ಸ್ಮರಣಿಕೆಗಳನ್ನು ಕೂಡಾ ಅಪಹರಿಸಿದ್ದಾರೆ. ಆದರೆ ಅರ್ಜುನ ಪುರಸ್ಕಾರ ಹಾಗೂ ತೇನ್‌ಝಿಂಗ್ ನೊರ್ಗೆ ಪ್ರಶಸ್ತಿ ಪದಕಗಳನ್ನು ಬಿಟ್ಟುಹೋಗಿದ್ದಾರೆ. ಅವು ಸಣ್ಣ ಗಾತ್ರದ್ದಾಗಿರುವುದರಿಂದ ಬಹುಶಃ ಅವರು ಅವುಗಳನ್ನು ಗುರುತಿಸಿರಲಿಕ್ಕಿಲ್ಲ ಎಂದು 54 ವರ್ಷ ವಯಸ್ಸಿನ ಬುಲಾ ಚೌಧುರಿ ಹೇಳಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ಬುಲಾ ಚೌಧುರಿ ಅವರ ಸಹೋದರ, ಹಿಂದ್ ಒತಾರ್‌ನಲ್ಲಿರುವ ಪೂರ್ವಿಕರ ಮನೆಗೆ ಭೇಟಿ ನೀಡಿದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯ ಹಿಂಭಾಗದ ಗೇಟ್ ಒಡೆಯಲಾಗಿದೆ ಹಾಗೂ ಕೊಠಡಿಗಳಲ್ಲಿನ ಸಾಮಾಗ್ರಿಗಳನ್ನು ಲೂಟಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅವರ್ಯಾಕೆ ಪದಕಗಳನ್ನು ಕೊಂಡೊಯ್ಯುತ್ತಿದ್ದಾರೆ? ಅದರಿಂದ ಅವರಿಗೆ ಯಾವುದೇ ಹಣ ದೊರೆಯಲಾರದು. ಆದರೆ ಅವು ನನ್ನ ಬದುಕಿನ ಅಮೂಲ್ಯ ನಿಧಿಗಳಾಗಿವೆ. ತನ್ನ ಮನೆ ಖಾಲಿ ಇರುವುದರಿಂದಾಗಿ ಅದು ಪ್ರತಿಸಲವೂ ದರೋಡೆಗೆ ಗುರಿಯಾಗುತ್ತಿದೆ ಎಂದು ಚೌಧಿರ ತಿಳಿಸಿದ್ದಾರೆ. ಬುಲಾ ಚೌಧುರಿ ಅವರು ಎಸ್‌ಎಎಫ್ ಕ್ರೀಡಾಕೂಟದಲ್ಲಿ ಆರು ಬಾರಿ ಚಿನ್ನದ ಪದಕ ವಿಜೇತೆಯಾಗಿದ್ದಾರೆ.