ಒಡಿಶಾ | ಬಿಜೆಪಿ ನಾಯಕನ ಬಂಧನಕ್ಕೆ ಒತ್ತಾಯಿಸಿ ಅಧಿಕಾರಿಗಳಿಂದ ಸಾಮೂಹಿಕ ರಜೆ : ಸರಕಾರಿ ಸೇವೆಗಳಲ್ಲಿ ವ್ಯತ್ಯಯ
Screengrab:X/@Naveen_Odisha
ಭುವನೇಶ್ವರ : ಒಡಿಶಾದ ಭುವನೇಶ್ವರದಲ್ಲಿ ಮಹಾನಗರ ಪಾಲಿಕೆಯ (ಬಿಎಂಸಿ) ಹಿರಿಯ ಅಧಿಕಾರಿ ಮೇಲಿನ ಹಲ್ಲೆಯನ್ನು ಖಂಡಿಸಿ 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಹಿರಿಯ ಅಧಿಕಾರಿಗಳು ಕಳೆದ ಎರಡು ದಿನಗಳಿಂದ ಸಾಮೂಹಿಕ ರಜೆ ಹಾಕಿ ಪ್ರತಿಭಟನೆಯನ್ನು ವ್ಯಕ್ತಪಡಿಸಿದ್ದು, ಒಡಿಶಾ ಸರಕಾರಿ ಕಚೇರಿಗಳಲ್ಲಿ ಆಡಳಿತಾತ್ಮಕ ಕೆಲಸಗಳ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಾಗಿದೆ.
ಬ್ಲಾಕ್, ತಾಲೂಕು ಮತ್ತು ಜಿಲ್ಲಾ ಮಟ್ಟದ ಸರಕಾರಿ ಕಚೇರಿಗಳಲ್ಲಿ ಸಾರ್ವಜನಿಕ ಸೇವೆಗಳನ್ನು ಒದಗಿಸುವಲ್ಲಿ ಒಡಿಶಾ ಆಡಳಿತ ಸೇವೆ (ಒಎಎಸ್) ಮತ್ತು ಒಡಿಶಾ ಕಂದಾಯ ಸೇವೆ (ಒಆರ್‌ಎಸ್) ಅಧಿಕಾರಿಗಳು ಪ್ರಮುಖವಾಗಿದ್ದಾರೆ.
ಸೋಮವಾರ, ಒಡಿಶಾ ಆಡಳಿತ ಸೇವೆಯ ಹಿರಿಯ ಅಧಿಕಾರಿ, ಬಿಎಂಸಿ ಹೆಚ್ಚುವರಿ ಆಯುಕ್ತ ರತ್ನಾಕರ್ ಸಾಹೂ ಅವರನ್ನು ದುಷ್ಕರ್ಮಿಗಳ ಗುಂಪೊಂದು ಬಿಜೆಪಿ ನಾಯಕ ಜಗನ್ನಾಥ್ ಪ್ರಧಾನ್ ಅವರಲ್ಲಿ ಕ್ಷಮೆಯಾಚಿಸುವಂತೆ ಆಗ್ರಹಿಸಿ ಕಚೇರಿ ಕೊಠಡಿಯಿಂದ ಹೊರಗೆಳೆದು ಹಲ್ಲೆ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಬಿಎಂಸಿ ಕಾರ್ಪೊರೇಟರ್ ಜೀವನ್ ರೌತ್ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಒಡಿಶಾ ಬಿಜೆಪಿ ಘಟಕವು ರೌತ್ ಸೇರಿದಂತೆ ಐವರು ಕಾರ್ಯಕರ್ತರನ್ನು ಪಕ್ಷದಿಂದ ಅಮಾನತುಗೊಳಿಸಿದೆ.
ಘಟನೆಯನ್ನು ಖಂಡಿಸಿ ಒಡಿಶಾ ಆಡಳಿತ ಸೇವಾ ಸಂಘ (Odisha Administrative Service Association) ಸಾಮೂಹಿಕ ರಜೆಯನ್ನು ಘೋಷಿಸಿದೆ. ಸಂಘದ ಸದಸ್ಯರು ಮುಖ್ಯ ಕಾರ್ಯದರ್ಶಿ ಮನೋಜ್ ಅಹುಜಾ ಅವರನ್ನು ಭೇಟಿ ಮಾಡಿ ಬೇಡಿಕೆ ಪತ್ರವನ್ನು ಸಲ್ಲಿಸಿದ್ದಾರೆ.
ʼಇಂತಹ ನಾಚಿಕೆಗೇಡಿನ ಕೃತ್ಯ, ರಾಜ್ಯಾದ್ಯಂತ ಕೆಲಸ ಮಾಡುತ್ತಿರುವ ಅಧಿಕಾರಿಗಳ ನೈತಿಕತೆಯನ್ನು ಹಾಳು ಮಾಡುತ್ತದೆ. ಆದ್ದರಿಂದ ತಹಶೀಲ್ದಾರ್‌ಗಳು, ಬ್ಲಾಕ್ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ಭದ್ರತೆ ನೀಡಬೇಕು. ಬಿಜೆಪಿ ನಾಯಕ ಪ್ರಧಾನ್ ದಾಳಿಯ ಹಿಂದಿನ ಪ್ರಮುಖ ಆರೋಪಿಯಾಗಿದ್ದು, ಆತನನ್ನು ತಕ್ಷಣ ಬಂಧಿಸಬೇಕು. ಬೇಡಿಕೆ ಈಡೇರುವವರೆಗೆ ಎಲ್ಲಾ ಅಧಿಕಾರಿಗಳು ರಜೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದೇವೆ ಎಂದು ʼಒಎಎಸ್ʼ ಸರಕಾರದ ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿದ ಪತ್ರದಲ್ಲಿ ಉಲ್ಲೇಖಿಸಿದೆ.