×
Ad

ಹಬ್ಬಹರಿದಿನಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನೇ ಖರೀದಿಸಿ: ಜನತೆಗೆ ಕರೆ ನೀಡಿದ ಪ್ರಧಾನಿ ಮೋದಿ

Update: 2023-10-29 15:29 IST

ನರೇಂದ್ರ ಮೋದಿ | Photo: PTI

ಹೊಸದಿಲ್ಲಿ: ಹಬ್ಬಹರಿದಿನಗಳಲ್ಲಿ ಸಣ್ಣ ವರ್ತಕರು ಹಾಗೂ ಬೀದಿಬದಿ ವ್ಯಾಪಾರಿಗಳಿಂದ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವುದು ನಮ್ಮ ಆದ್ಯತೆಯಾಗಿರಬೇಕು ಎಂದು ರವಿವಾರ ರೇಡಿಯೊದಲ್ಲಿನ ತಮ್ಮ 106ನೇ ಆವೃತ್ತಿಯ ಮನದ ಮಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾರತೀಯರಿಗೆ ಕರೆ ನೀಡಿದ್ದಾರೆ. ‘ವೋಕಲ್ ಫಾರ್ ವೋಕಲ್’ನ ಸ್ಫೂರ್ತಿ ಈಗಷ್ಟೇ ಆರಂಭವಾಗಿದ್ದು, ಅದು ಕೇವಲ ಹಬ್ಬಗಳ ಖರೀದಿಗೆ ಮಾತ್ರ ಸೀಮಿತವಾಗಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.

ನಮ್ಮ ಎಲ್ಲ ಅಗತ್ಯಗಳಿಗೆ ಬೇಕಾದ ವಸ್ತುಗಳು ನಮ್ಮ ದೇಶದಲ್ಲೇ ದೊರೆಯುತ್ತವೆ ಎಂದೂ ಅವರು ಹೇಳಿದ್ದಾರೆ.

“ಮಿತ್ರರೆ, ಎಲ್ಲ ಸಮಯದಂತೆ ಈ ಬಾರಿಯೂ ಹಬ್ಬಗಳ ಸಮಯದಲ್ಲಿ ನಮ್ಮ ಆದ್ಯತೆಯು ‘ವೋಕಲ್ ಫಾರ್ ಲೋಕಲ್’ ಆಗಿರಬೇಕು ಹಾಗೂ ನಮ್ಮ ಕನಸಾದ ಆತ್ಮನಿರ್ಭರ ಭಾರತವನ್ನು ನಾವೆಲ್ಲರೂ ಒಟ್ಟಾಗಿ ಸೇರಿ ನನಸು ಮಾಡಬೇಕು. ಈ ಬಾರಿ ನಾವು ನಮ್ಮ ದೇಶದ ಶ್ರಮಿಕರ, ನಮ್ಮ ದೇಶದ ಯುವಕರ ಪ್ರತಿಭೆಯ ಬೆವರ ಹನಿಯಲ್ಲಿ ಮನೆಗಳನ್ನು ಬೆಳಗೋಣ. ನಮ್ಮ ದೇಶದ ಜನರಿಗೆ ಉತ್ಪಾದನೆಯಲ್ಲಿ ಉದ್ಯೋಗ ನೀಡಿರುವ ಉತ್ಪನ್ನಗಳಿಂದ ಮನೆಗಳನ್ನು ಬೆಳಗೋಣ. ನಮ್ಮ ದೈನಂದಿನ ಅಗತ್ಯಗಳು ಏನೇನಿವೆಯೊ ಅವೆಲ್ಲವನ್ನೂ ಸ್ಥಳೀಯವಾಗಿಯೇ ಖರೀದಿಸೋಣ. ಆದರೆ, ನೀವು ಮತ್ತೊಂದು ವಿಷಯದತ್ತ ಗಮನ ನೀಡಬೇಕಿದೆ. ‘ವೋಕಲ್ ಫಾರ್ ಲೋಕಲ್’ ಸ್ಫೂರ್ತಿಯು ಹಬ್ಬದ ಖರೀದಿಗೆ ಮಾತ್ರ ಸೀಮಿತವಾಗಕೂಡದು” ಎಂದು ಪ್ರಧಾನಿ ಕರೆ ನೀಡಿದ್ದಾರೆ.

ಇದೇ ವೇಳೆ ಈ ಬಾರಿಯ ಖಾದಿ ಮಹೋತ್ಸವವು ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದಿದೆ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News