×
Ad

CAA ಜಾರಿ: ನೈಜ ವಿಷಯಗಳಿಂದ ಗಮನ ಬೇರೆಡೆ ಸೆಳೆಯುವ ಪ್ರಯತ್ನ ಎಂದ ಅರವಿಂದ್ ಕೇಜ್ರಿವಾಲ್

Update: 2024-03-12 12:59 IST

ಅರವಿಂದ್ ಕೇಜ್ರಿವಾಲ್ |Photo: ANI

ಹೊಸದಿಲ್ಲಿ: ಲೋಕಸಭಾ ಚುನಾವಣೆಗೆ ಇನ್ನು ಕೆಲವೇ ವಾರಗಳಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಗೆ ಅಧಿಸೂಚನೆ ಹೊರಡಿಸಿರುವುದು ನೈಜ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನವಾಗಿದೆ ಎಂದು ಆಪ್ ಪಕ್ಷದ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, “ಬಡವರು ಮತ್ತು ಮಧ್ಯಯಮ ವರ್ಗದವರು ಹಣದುಬ್ಬರದಿಂದ ತೀವ್ರ ಸ್ವರೂಪದಲ್ಲಿ ತೊಂದರೆಗೀಡಾಗಿರುವಾಗ ಹಾಗು ಯುವಕರು ಉದ್ಯೋಗಗಳನ್ನು ಪಡೆಯಲು ಪರದಾಡುತ್ತಿರುವಾಗ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದೆ” ಎಂದು ಅವರು ಟೀಕಿಸಿದ್ದಾರೆ.

“ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ನೆರೆಯ ಮೂರು ದೇಶಗಳಿಂದ ಭಾರತಕ್ಕೆ ವಲಸೆ ಬಂದಿರುವವರಿಗೆ ಪೌರತ್ವದ ಭರವಸೆ ನೀಡುತ್ತಿದೆ. ಇದರರ್ಥ ನೆರೆಯ ದೇಶಗಳಿಂದ ಜನರನ್ನು ಕರೆ ತಂದು ಭಾರತದಲ್ಲಿ ನೆಲೆಸುವಂತೆ ಮಾಡುವುದು ಅವರಿಗೆ ಬೇಕಿದೆ. ಯಾಕೆ? ಮತ ಬ್ಯಾಂಕನ್ನು ಸೃಷ್ಟಿಸಿಕೊಳ್ಳಲು” ಎಂದು ಅವರು ಆರೋಪಿಸಿದ್ದಾರೆ.

“ನಮ್ಮ ಯುವಕರಿಗೇ ಉದ್ಯೋಗ ಇಲ್ಲದೆ ಇರುವಾಗ, ನೆರೆಯ ದೇಶಗಳಿಂದ ಬರುವವರಿಗೆ ಯಾರು ಉದ್ಯೋಗಾವಕಾಶ ಒದಗಿಸುತ್ತಾರೆ. ಅವರಿಗೆ ಯಾರು ಮನೆಗಳನ್ನು ನಿರ್ಮಿಸುತ್ತಾರೆ? ಬಿಜೆಪಿಯು ಅವರಿಗೆ ಉದ್ಯೋಗ ಒದಗಿಸಲಿದೆಯೆ? ಬಿಜೆಪಿಯು ಅವರಿಗೆ ಮನೆಗಳನ್ನು ನಿರ್ಮಿಸಿಕೊಡಲಿದೆಯೆ?” ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News