ಯಾರನ್ನಾದರೂ ʼಮಿಯಾಂ-ತಿಯಾನ್ʼ, ʼಪಾಕಿಸ್ತಾನಿʼ ಎಂದು ಕರೆಯುವುದು ಅಪರಾಧವಲ್ಲ: ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಯಾರನ್ನಾದರೂ 'ಮಿಯಾಂ-ತಿಯಾನ್' ಅಥವಾ 'ಪಾಕಿಸ್ತಾನಿ' ಎಂದು ಕರೆಯುವುದು ಕಳಪೆ ಅಭಿರುಚಿಯ ಹೇಳಿಕೆಯಾಗಿರಬಹುದು. ಆದರೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಅಪರಾಧವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸರಕಾರಿ ನೌಕರನನ್ನು ʼಪಾಕಿಸ್ತಾನಿʼ ಎಂದು ಕರೆದ ಆರೋಪದ ಮೇಲೆ ವ್ಯಕ್ತಿಯೋರ್ವನ ವಿರುದ್ಧ ದಾಖಲಿಸಿದ ಪ್ರಕರಣವನ್ನು ಮುಕ್ತಾಯಗೊಳಿಸುವಾಗ ನ್ಯಾಯಮೂರ್ತಿಗಳಾದ ಬಿವಿ ನಾಗರತ್ನ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಪೀಠವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಜಾರ್ಖಂಡ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗುಮಾಸ್ತರೋರ್ವರು ಈ ಕುರಿತು ದೂರು ದಾಖಲಿಸಿದ್ದರು. ಹರಿನಂದನ್ ಸಿಂಗ್ ಎಂಬಾತ ಹೆಚ್ಚುವರಿ ಜಿಲ್ಲಾಧಿಕಾರಿಯಿಂದ ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ ಕಾಯ್ದೆ) ಅಡಿಯಲ್ಲಿ ಕೆಲವು ಮಾಹಿತಿಯನ್ನು ಕೇಳಿದ್ದರು ಮತ್ತು ಈ ಮಾಹಿತಿಯನ್ನು ಅವರಿಗೆ ನೀಡಲಾಗಿದೆ. ಇದರಿಂದ ತೃಪ್ತರಾಗದ ಸಿಂಗ್ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿ ಪ್ರಾಧಿಕಾರವು ದೂರುದಾರರಿಗೆ ವೈಯಕ್ತಿಕವಾಗಿ ಮಾಹಿತಿಯನ್ನು ನೀಡುವಂತೆ ನಿರ್ದೇಶಿಸಿತು. ಈ ಉದ್ದೇಶಕ್ಕಾಗಿ ಆರೋಪಿಯ ನಿವಾಸಕ್ಕೆ ತೆರಳಲಾಗಿದೆ.
ಸಿಂಗ್ ಆರಂಭದಲ್ಲಿ ದಾಖಲೆಗಳನ್ನು ಸ್ವೀಕರಿಸಲು ನಿರಾಕರಿಸಿದರು. ಆದರೆ, ದೂರುದಾರರ ಒತ್ತಾಯದ ಮೇರೆಗೆ ಅಂತಿಮವಾಗಿ ಅವುಗಳನ್ನು ಸ್ವೀಕರಿಸಿದರು. ಈ ವೇಳೆ ಅವರು ನನ್ನನ್ನು ʼಪಾಕಿಸ್ತಾನಿʼ ಎಂದು ನಿಂದಿಸಿದರು ಮತ್ತು ಕರ್ತವ್ಯಕ್ಕೆ ಅಡ್ಡಿಪಡಿಸಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.