ಮಾಸ್ಕೋ ಮೇಲೆ ದಾಳಿ ಮಾಡಲು ಸಾಧ್ಯವೇ?: ಝೆಲೆನ್ಸ್ಕಿಗೆ ನೇರವಾಗಿ ಕೇಳಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್ , ವೊಲೊದಿಮಿರ್ ಝೆಲೆನ್ಸ್ಕಿ | PC : NDTV
ವಾಶಿಂಗ್ಟನ್: ಶಸ್ತ್ರಾಸ್ತ್ರಗಳನ್ನು ನೀಡಿದರೆ ರಷ್ಯಾದ ಮೇಲೆ ದಾಳಿ ಮಾಡಬಹುದೇ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಅವರನ್ನು ಕೇಳಿರುವ ಘಟನೆ ನಡೆದಿದೆ ಎಂದು financial times ವರದಿ ಮಾಡಿದೆ.
ಉಕ್ರೇನ್ ಮೇಲೆ ರಷ್ಯಾದ ಆಕ್ರಮಣ ಮುಂದುವರೆದಿರುವಂತೆ ಯುದ್ದದ ತಂತ್ರಗಾರಿಕೆಯಲ್ಲಿ ಮಹತ್ವದ ತಿರುವು ತೋರಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ರಷ್ಯಾದ ಮೇಲಿನ ದಾಳಿ ನಡೆಸುವ ಸಾಧ್ಯತೆಯ ಬಗ್ಗೆ ಝೆಲೆನ್ಸ್ಕಿ ಜೊತೆ ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಜುಲೈ 4ರಂದು ದೂರವಾಣಿಯಲ್ಲಿ ಈ ಕುರಿತ ಸಂಭಾಷಣೆ ನಡೆದಿದೆ ಎನ್ನಲಾಗಿದ್ದು, "ನೀವು ಮಾಸ್ಕೋ ಅಥವಾ ಸೇಂಟ್ ಪೀಟರ್ಸ್‌ಬರ್ಗ್ ಮೇಲೆ ದಾಳಿ ನಡೆಸಬಹುದೇ?" ಎಂದು ಟ್ರಂಪ್, ಝೆಲೆನ್ಸ್ಕಿಗೆ ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಝೆಲೆನ್ಸ್ಕಿ, "ನೀವು ನಮಗೆ ಅಗತ್ಯ ಶಸ್ತ್ರಾಸ್ತ್ರಗಳನ್ನು ನೀಡಿದರೆ, ಖಂಡಿತವಾಗಿ ಸಾಧ್ಯ" ಎಂದು ಆತ್ಮವಿಶ್ವಾಸದಿಂದ ಉತ್ತರ ನೀಡಿದ್ದಾರೆ ಎನ್ನಲಾಗಿದೆ.
ಟ್ರಂಪ್ ಅವರು ಇತ್ತೀಚೆಗೆ ಉಕ್ರೇನ್ ಗೆ ಪೇಟ್ರಿಯಾಟ್ ವಾಯು ರಕ್ಷಣಾ ವ್ಯವಸ್ಥೆ ಸೇರಿದಂತೆ ಹೊಸ ನಾಟೋ ನೇತೃತ್ವದ ಸೈನಿಕರ ನೆರವು ಪ್ಯಾಕೇಜ್ ಗಾಗಿ ಬೆಂಬಲ ವ್ಯಕ್ತಪಡಿಸಿರುವ ನಡುವೆ ಈ ಬೆಳವಣಿಗೆಯು ರಷ್ಯಾ-ಉಕ್ರೇನ್ ಯುದ್ಧಕ್ಕೆ ಹೊಸ ತಿರುವು ನೀಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಂದಿಗೆ ಇತ್ತೀಚಿನ ಸಂಭಾಷಣೆಯ ನಂತರ, ರಷ್ಯಾ ಕುರಿತಂತೆ ಟ್ರಂಪ್ ಅವರ ನಿಲುವು ಬದಲಾಗಿದೆ. ರಷ್ಯಾವು ಉಕ್ರೇನ್ ಮೇಲೆ ತನ್ನ ಆಕ್ರಮಣವನ್ನು ನಿಲ್ಲಿಸಲು ಯಾವುದೇ ಪ್ರಾಮಾಣಿಕ ಉದ್ದೇಶ ಹೊಂದಿಲ್ಲ ಎಂಬ ನಿಲುವನ್ನು ಟ್ರಂಪ್ ತಾಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಒತ್ತಡದ ತಂತ್ರವನ್ನು ಹೇರಲು ಟ್ರಂಪ್ ಉಕ್ರೇನ್ ಅಧ್ಯಕ್ಷರ ಮುಂದೆ ನೇರ ಆಯ್ಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಇತ್ತೀಚಿಗೆ ಟ್ರಂಪ್, "ಪುಟಿನ್ ಚೆನ್ನಾಗಿ ಮಾತನಾಡುತ್ತಾರೆ, ಆದರೆ ನಂತರ ಅವರು ಎಲ್ಲರ ಮೇಲೆ ಬಾಂಬ್ ಹಾಕುತ್ತಾರೆ" ಎಂಬ ಹೇಳಿಕೆ ನೀಡಿರುವುದು, ರಷ್ಯಾ ಅಧ್ಯಕ್ಷರ ಕುರಿತು ಅವರಿಗಿರುವ ಅಸಮಾಧಾನವನ್ನು ಎತ್ತಿ ತೋರಿಸುತ್ತಿದೆ. ಶಾಂತಿ ಮಾತುಕತೆಗೆ ರಷ್ಯಾವನ್ನು ಒತ್ತಾಯಿಸಲು, ಈ ರೀತಿಯ ತಂತ್ರಗಳನ್ನು ಟ್ರಂಪ್ ಹೂಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಕ್ತಾರ ದಿಮಿಟ್ರಿ ಪೆಸ್ಕೋವ್, "ಇಂತಹ ಹೇಳಿಕೆಗಳು ಮತ್ತು ತಂತ್ರಗಳು ಶಾಂತಿಯ ಬದಲು ಯುದ್ಧವನ್ನು ಮುಂದುವರಿಸಲು ಉಕ್ರೇನ್ ಗೆ ಪ್ರೇರಣೆಯಾಗಬಹುದು", ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ. ಅಮೆರಿಕದ ತೀರ್ಮಾನಗಳು ಬ್ರಸೆಲ್ಸ್‌ನ ನ್ಯಾಟೋ ನೀತಿಯ ಮೇಲೂ ಪರಿಣಾಮ ಬೀರಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.