×
Ad

ಬಿಎಮ್‌ಡಬ್ಲ್ಯು ಟೆಂಡರ್‌ಗಳನ್ನು ರದ್ದುಪಡಿಸಿ; ಇವಿ ಖರೀದಿಸಿ: ಲೋಕಪಾಲಕ್ಕೆ ನೀತಿ ಆಯೋಗದ ಮಾಜಿ ಸಿಇಒ ಸಲಹೆ

Update: 2025-10-23 20:32 IST

ಅಮಿತಾಭ್ ಕಾಂತ್ |Photo Credit : PTI

ಹೊಸದಿಲ್ಲಿ: ಏಳು ವಿಲಾಸಿ ಬಿಎಮ್‌ಡಬ್ಲ್ಯು 330 ಎಲ್‌ಐ ಕಾರುಗಳ ಪೂರೈಕೆಗೆ ಲೋಕಪಾಲರು ಸಾರ್ವಜನಿಕ ಟೆಂಡರ್‌ಗಳನ್ನು ಆಹ್ವಾನಿಸಿರುವ ವಿವಾದದ ನಡುವೆಯೇ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಈ ಟೆಂಡರನ್ನು ರದ್ದುಗೊಳಿಸುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಅದೇ ವೇಳೆ, ಈ ಕಾರುಗಳ ಬದಲಿಗೆ, ಮೇಕ್-ಇನ್-ಇಂಡಿಯಾ ಇಲೆಕ್ಟ್ರಿಕ್ ವಾಹನಗಳನ್ನು ಬೆಂಬಲಿಸುವಂತೆ ಕರೆ ನೀಡಿದ್ದಾರೆ.

‘‘ಭಾರತೀಯ ಲೋಕಪಾಲಕ್ಕಾಗಿ ಏಳು ಬಿಎಮ್‌ಡಬ್ಲ್ಯು 3 ಸೀರೀಸ್ ಎಲ್‌ಐ ಕಾರುಗಳನ್ನು ಪೂರೈಸುವುದಕ್ಕಾಗಿ ಪ್ರತಿಷ್ಠಿತ ಏಜನ್ಸಿಗಳಿಂದ ಬಹಿರಂಗ ಟೆಂಡರ್‌ಗಳನ್ನು ಭಾರತೀಯ ಲೋಕಪಾಲ ಆಹ್ವಾನಿಸಿದೆ’’ ಎಂದು ಟೆಂಡರ್ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಟೆಂಡರ್ ಸಲ್ಲಿಕೆಯು ಅಕ್ಟೋಬರ್ 17ರಂದು ಆರಂಭಗೊಂಡು ನವೆಂಬರ್ 6ರಂದು ಕೊನೆಗೊಳ್ಳುತ್ತದೆ. ನವೆಂಬರ್ 7ರಂದು ಟೆಂಡರ್‌ಗಳನ್ನು ಪರಿಶೀಲಿಸಲಾಗುತ್ತದೆ ಎಂದು ಅದು ಹೇಳಿದೆ.

ಒಂದು ಬಿಎಮ್‌ಡಬ್ಲ್ಯು 3 ಸೀರೀಸ್ ಎಲ್‌ಐ ಕಾರಿನ ಬೆಲೆ 70 ಲಕ್ಷ ರೂಪಾಯಿಗಿಂತಲೂ ಹೆಚ್ಚಾಗುತ್ತದೆ. ‘‘ಈ ಕಾರುಗಳನ್ನು ಎರಡು ವಾರಗಳಲ್ಲಿ ಪೂರೈಸಿದರೆ ಉತ್ತಮ ಮತ್ತು 30 ದಿನಗಳಿಗಿಂತಲೂ ಅಧಿಕ ವಿಳಂಬವಾಗಬಾರದು’’ ಎಂದು ಟೆಂಡರ್ ನೋಟಿಸ್ ಹೇಳುತ್ತದೆ.

ಲೋಕಪಾಲರು ನೀಡಿರುವ ಈ ಟೆಂಡರ್ ಜಾಹೀರಾತಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ವಕೀಲ ಹಾಗೂ ಹೋರಾಟಗಾರ ಪ್ರಶಾಂತ್ ಭೂಷಣ್ ಮತ್ತು ಕಾಂಗ್ರೆಸ್ ವಕ್ತಾರೆ ಶಮಾ ಮುಹಮ್ಮದ್ ಸೇರಿದಂತೆ ಹಲವರು ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ನಡೆಯನ್ನು ಟೀಕಿಸಿದ್ದರು.

‘‘ಅವರು ಈ ಟೆಂಡರನ್ನು ರದ್ದುಪಡಿಸಬೇಕು ಮತ್ತು ಮೇಕ್-ಇನ್-ಇಂಡಿಯಾ ಇಲೆಕ್ಟ್ರಿಕ್ ಕಾರುಗಳನ್ನು ಖರೀದಿಸಬೇಕು. ಮಹೀಂದ್ರ ಕಂಪೆನಿಯ ಎಕ್ಸ್‌ಇವಿ 9ಇ, ಬಿಇ 6 ಅಥವಾ ಟಾಟಾ ಕಂಪೆನಿಯ ಹ್ಯಾರಿಯರ್ ಇವಿ ಕಾರುಗಳನ್ನು ಖರೀದಿಸಬಹುದಾಗಿದೆ. ಈ ಕಾರುಗಳು ಅತ್ಯುತ್ತಮ ದರ್ಜೆಯ ಕಾರುಗಳಾಗಿವೆ’’ ಎಂದು ಅಮಿತಾಭ್ ಕಾಂತ್ ‘ಎಕ್ಸ್’ನಲ್ಲಿ ಹಾಕಿದ ಸಂದೇಶವೊಂದರಲ್ಲಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News