×
Ad

ಜಾತಿ ಸಮೀಕ್ಷೆಯ ಆಧಾರದಲ್ಲಿ ಕ್ರಮ ತೆಗೆದುಕೊಳ್ಳುವುದರಿಂದ ಬಿಹಾರ ಸರಕಾರವನ್ನು ತಡೆಯಲು ಸಾಧ್ಯವಿಲ್ಲ: ಸುಪ್ರೀಂ

Update: 2023-10-06 21:44 IST

ಹೊಸದಿಲ್ಲಿ: ಜಾತಿ ಸಮೀಕ್ಷೆಯ ವರದಿಯ ಆಧಾರದಲ್ಲಿ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಬಿಹಾರ ಸರಕಾರವನ್ನು ತಡೆಯಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ಜಾತಿ ಸಮೀಕ್ಷೆಯನ್ನು ಎತ್ತಿ ಹಿಡಿಯುವ ಪಾಟ್ನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ‘ಯೂತ್ ಫಾರ್ ಇಕ್ವಾಲಿಟಿ’ ಮತ್ತು ‘ಏಕ್ ಸೋಚ್ ಏಕ್ ಪ್ರಯಾಸ್’ ಎಂಬ ಸರಕಾರೇತರ ಸಂಘಟನೆಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್.ವಿ.ಎನ್. ಭಟ್ಟಿ ಅವರನ್ನೊಳಗೊಂಡ ವಿಭಾಗ ಪೀಠವು ಈ ನಿರ್ಧಾರವನ್ನು ತೆಗೆದುಕೊಂಡಿತು.

ಜಾತಿ ಸಮೀಕ್ಷೆಯು ಜನಗಣತಿಗೆ ಸಮವಾಗಿದೆ ಹಾಗೂ ಸಂವಿಧಾನದ ಪ್ರಕಾರ, ಜನಗಣತಿಯನ್ನು ಕೇಂದ್ರ ಸರಕಾರವಷ್ಟೇ ಮಾಡಬಹುದಾಗಿದೆ ಎಂಬುದಾಗಿ ಅರ್ಜಿದಾರರು ವಾದಿಸಿದ್ದರು.

ಯಾಕೆ ಸಂಗ್ರಹಿಸಲಾಗುತ್ತಿದೆ ಎಂಬ ಮಾಹಿತಿ ನೀಡದೆ ನಾಗರಿಕರ ಖಾಸಗಿ ಮಾಹಿತಿಗಳನ್ನು ಸಂಗ್ರಹಿಸುವ ಮೂಲಕ ರಾಜ್ಯ ಸರಕಾರವು ನಾಗರಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸುತ್ತಿದೆ ಎಂಬುದಾಗಿಯೂ ಯೂತ್ ಫಾರ್ ಇಕ್ವಾಲಿಟಿ ವಾದಿಸಿತ್ತು.

ಜನವರಿಯಲ್ಲಿ ಆರಂಭಿಸಲಾಗಿದ್ದ ಜಾತಿ ಸಮೀಕ್ಷೆಯ ವರದಿಯನ್ನು ಸೋಮವಾರ ರಾಜ್ಯ ಸರಕಾರ ಬಿಡುಗಡೆಗೊಳಿಸಿದೆ. ರಾಜ್ಯದಲ್ಲಿರುವ ಇತರ ಹಿಂದುಳಿದ ವರ್ಗಗಳು ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಒಟ್ಟು ಪ್ರಮಾಣ ರಾಜ್ಯದ ಜನಸಂಖ್ಯೆಯ 63%ದಷ್ಟಿದೆ ಎಂದು ವರದಿ ತಿಳಿಸಿದೆ. ಬಿಹಾರದ 13.07 ಕೋಟಿ ಜನಸಂಖ್ಯೆಯಲ್ಲಿ, ಅತ್ಯಂತ ಹಿಂದುಳಿದ ವರ್ಗಗಳ ಪ್ರಮಾಣ 36% ಆಗಿದ್ದು, ಇದು ಅತಿ ದೊಡ್ಡ ಸಾಮಾಜಿಕ ಘಟಕವಾಗಿದೆ. ನಂತರದ ಸ್ಥಾನದಲ್ಲಿ 27.13%ದಷ್ಟಿರುವ ಇತರ ಹಿಂದುಳಿದ ವರ್ಗಗಳು ಬರುತ್ತವೆ.

ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಬಿಹಾರ ಸರಕಾರವು ಜಾತಿ ಸಮೀಕ್ಷೆಯ ವರದಿಯನ್ನು ಪ್ರಕಟಿಸಿದೆ ಎಂದು ಅರ್ಜಿದಾರರೊಬ್ಬರ ಪರವಾಗಿ ವಾದಿಸಿದ ಹಿರಿಯ ವಕೀಲೆ ಅಪರಾಜಿತಾ ಸಿಂಗ್ ಹೇಳಿದರು. ಈ ವರದಿಯ ಆಧಾರದಲ್ಲಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳದಂತೆ ರಾಜ್ಯ ಸರಕಾರಕ್ಕೆ ಸೂಚಿಸಿ ಮಧ್ಯಂತರ ಆದೇಶವನ್ನು ಹೊರಡಿಸಬೇಕೆಂದು ಅವರು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಬಿಹಾರ ಸರಕಾರದ ಪರವಾಗಿ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್, ವರದಿಯನ್ನು ಪ್ರಕಟಿಸದಂತೆ ನ್ಯಾಯಾಲಯ ಯಾವುದೇ ಸೂಚನೆ ನೀಡಿಲ್ಲ, ಹಾಗಾಗಿ ವರದಿಯನ್ನು ಪ್ರಕಟಿಸಲಾಗಿದೆ ಎಂದು ಹೇಳಿದರು.

ಆಗ ಮಧ್ಯಪ್ರವೇಶಿಸಿದ ನ್ಯಾಯಪೀಠವು, ‘‘ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದರಿಂದ ರಾಜ್ಯ ಸರಕಾರವನ್ನು ಅಥವಾ ಯಾವುದೇ ಸರಕಾರವನ್ನು ನಾವು ತಡೆಯುವಂತಿಲ್ಲ’’ ಎಂದು ಹೇಳಿತು. ಬಳಿಕ ಅದು ವಿಚಾರಣೆಯನ್ನು ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News