ಪ್ರಧಾನಿ ಮೋದಿ, ಆರೆಸ್ಸೆಸ್ ಕುರಿತ ಆಕ್ಷೇಪಾರ್ಹ ವ್ಯಂಗ್ಯಚಿತ್ರ : ವಾಕ್, ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಎಂದ ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್ | PC : PTI
ಹೊಸದಿಲ್ಲಿ : ಪ್ರಧಾನಿ ಮೋದಿ, ಆರೆಸ್ಸೆಸ್ ಕುರಿತ ಆಕ್ಷೇಪಾರ್ಹ ವ್ಯಂಗ್ಯಚಿತ್ರ ಹಂಚಿಕೊಳ್ಳುವುದು ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ದುರುಪಯೋಗ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಆರೆಸ್ಸೆಸ್ ಕಾರ್ಯಕರ್ತರ ಆಕ್ಷೇಪಾರ್ಹ ವ್ಯಂಗ್ಯಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡ ಆರೋಪ ಎದುರಿಸುತ್ತಿರುವ ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯಾ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.
ನೀವು ಇದನ್ನೆಲ್ಲಾ ಏಕೆ ಮಾಡುತ್ತೀರಿ? ವ್ಯಂಗ್ಯಚಿತ್ರಕಾರ ಹೇಮಂತ್ ಮಾಳವೀಯ ಅವರ ವಕೀಲರನ್ನು ನ್ಯಾಯಮೂರ್ತಿಗಳಾದ ಸುಧಾಂಶು ಧುಲಿಯಾ ಮತ್ತು ಅರವಿಂದ್ ಕುಮಾರ್ ಅವರ ನೇತೃತ್ವದ ಪೀಠ ಪ್ರಶ್ನಿಸಿದೆ.
ಮಾಳವೀಯ ಅವರನ್ನು ಪ್ರತಿನಿಧಿಸುವ ವಕೀಲೆ ವೃಂದಾ ಗ್ರೋವರ್, ಈ ವಿಷಯ 2021ರಲ್ಲಿ ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿನ ವ್ಯಂಗ್ಯಚಿತ್ರ ಪೋಸ್ಟ್‌ಗೆ ಸಂಬಂಧಿಸಿದೆ ಎಂದು ಹೇಳಿದರು.
ಮಾಳವೀಯ ಮಾಡಿದ ಪೋಸ್ಟ್ ಅನ್ನು ಅಳಿಸುವುದಾಗಿ ಗ್ರೋವರ್ ನ್ಯಾಯಾಲಯಕ್ಕೆ ತಿಳಿಸಿದರು. ಈ ವೇಳೆ ನ್ಯಾಯಾಲಯ, ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಹೇಳಿದೆ.
ಈ ಕುರಿತು ಮುಂದಿನ ವಿಚಾರಣೆ ಜುಲೈ 15ಕ್ಕೆ ಮುಂದೂಡಲಾಗಿದೆ. ಮಾಳವೀಯ ಅವರು ಜುಲೈ 3ರಂದು ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದ ಮಧ್ಯಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.