×
Ad

ದೇಶದಲ್ಲಿ ಜಾತಿ ತಾರತಮ್ಯ ನಿವಾರಣೆ ಕಾಯ್ದೆ ಇಂದಿನ ಅಗತ್ಯ: ರಾಹುಲ್ ಗಾಂಧಿ

Update: 2026-01-18 00:09 IST

ರಾಹುಲ್ ಗಾಂಧಿ | PC : PTI

ಹೊಸದಿಲ್ಲಿ, ಜ. 17: ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ದಲಿತ ಯುವ ಸಮುದಾಯಗಳ ವಾಸ್ತವ ಪರಿಸ್ಥಿತಿ ಬದಲಾಗಿಲ್ಲ. ಆದ್ದರಿಂದ ದೇಶಕ್ಕೆ ಜಾತಿ ತಾರತಮ್ಯ ನಿವಾರಣೆ ಕಾಯ್ದೆಯ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶನಿವಾರ ಹೇಳಿದ್ದಾರೆ.

ಹೈದರಾಬಾದ್ ವಿಶ್ವವಿದ್ಯಾನಿಲಯದ 26 ವರ್ಷದ ದಲಿತ ವಿದ್ಯಾರ್ಥಿಯಾಗಿದ್ದ ರೋಹಿತ್ ವೇಮುಲ ಕಿರುಕುಳದ ಹಿನ್ನೆಲೆಯಲ್ಲಿ 2016 ಜನವರಿ 17ರಂದು ಆತ್ಮಹತ್ಯೆಗೆ ಶರಣಾಗಿದ್ದರು.

ರೋಹಿತ್ ವೇಮುಲ ಅವರ 10ನೇ ವರ್ಷದ ಸ್ಮರಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ‘ಎಕ್ಸ್’ನಲ್ಲಿ ಈ ಪೋಸ್ಟ್ ಮಾಡಿದ್ದಾರೆ.

ಪೋಸ್ಟ್‌ನಲ್ಲಿ ಅವರು, ‘‘ರೋಹಿತ್ ವೇಮುಲ ನಿಧನರಾಗಿ ಇಂದಿಗೆ 10 ವರ್ಷಗಳು ಆಗಿವೆ. ಆದರೆ, ರೋಹಿತ್ ಅವರ ಪ್ರಶ್ನೆಗಳು ಇಂದಿಗೂ ನಮ್ಮ ಹೃದಯದಲ್ಲಿ ಪ್ರತಿಧ್ವನಿಸುತ್ತಿವೆ. ಈ ದೇಶದಲ್ಲಿ ಎಲ್ಲರಿಗೂ ಕನಸು ಕಾಣುವ ಸಮಾನ ಹಕ್ಕು ಇದೆಯೇ ? ರೋಹಿತ್ ಅವರು ಕಲಿಯಲು ಬಯಸಿದರು, ಅವರು ಬರೆಯಲು ಬಯಸಿದರು. ಅವರು ಈ ದೇಶವನ್ನು ಉತ್ತಮಗೊಳಿಸಲು ವಿಜ್ಞಾನ, ಸಮಾಜ ಹಾಗೂ ಮಾನವತೆಯನ್ನು ಅರ್ಥ ಮಾಡಿಕೊಳ್ಳಲು ಬಯಸಿದರು. ಆದರೆ, ಈ ವ್ಯವಸ್ಥೆ ದಲಿತರ ಅಭಿವೃದ್ಧಿಯನ್ನು ಸಹಿಸುವುದಿಲ್ಲ’’ ಎಂದು ಅವರು ಹೇಳಿದರು.

‘‘ಇಂದು ಏನಾಗಿದೆ ? ದಲಿತ ಯುವಜನರ ವಾಸ್ತವ ಸ್ಥಿತಿ ಬದಲಾಗಿದೆಯೇ ? ಕ್ಯಾಂಪಸ್‌ನಲ್ಲಿ ಅದೇ ನಿಂದನೆ, ಹಾಸ್ಟೆಲ್‌ಗಳಲ್ಲಿ ಅದೇ ಪ್ರತ್ಯೇಕತೆ, ತರಗತಿ ಕೊಠಡಿಯಲ್ಲಿ ಅದೇ ಕೀಳರಿಮೆ, ಅದೇ ಹಿಂಸೆ, ಕೆಲವೊಮ್ಮೆ ಅಂತದ್ದೇ ಸಾವು. ಈ ದೇಶದಲ್ಲಿ ಜಾತಿಯೇ ಅತಿ ದೊಡ್ಡ ಪ್ರವೇಶ ಪತ್ರವಾಗಿರುವುದು ಇದಕ್ಕೆ ಕಾರಣ’’ ಎಂದು ಅವರು ಹೇಳಿದ್ದಾರೆ.

ಆದ್ದರಿಂದ ರೋಹಿತ್ ವೇಮುಲ ಕಾಯ್ದೆ ಕೇವಲ ಘೋಷಣೆ ಅಲ್ಲ, ಅದು ಇಂದಿನ ಅಗತ್ಯ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News