ಚತ್ತೀಸ್‌ಗಢ | ಭದ್ರತಾ ಪಡೆಗಳ ಗುಂಡಿನ ದಾಳಿಗೆ ಇಬ್ಬರು ಶಂಕಿತ ನಕ್ಸಲರು ಮೃತ್ಯು
ಸಾಂದರ್ಭಿಕ ಚಿತ್ರ | PC : PTI
ಬಿಜಾಪುರ, ಜ. 17: ಚತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಹಾಗೂ ಶಂಕಿತ ನಕ್ಸಲೀಯರ ನಡುವೆ ಶನಿವಾರ ನಡೆದ ಗುಂಡಿನ ಕಾಳಗದಲ್ಲಿ ದಿಲೀಪ್ ಬೆಡ್ಜಾ ಸೇರಿದಂತೆ ಇಬ್ಬರು ಶಂಕಿತ ಮಾವೋವಾದಿಗಳು ಮೃತಪಟ್ಟಿದ್ದಾರೆ.
ಭದ್ರತಾ ಪಡೆಗಳ ಜಂಟಿ ತಂಡ ಜಿಲ್ಲೆಯ ವಾಯುವ್ಯ ಪ್ರದೇಶದ ಅರಣ್ಯದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿದ ಸಂದರ್ಭ ಶನಿವಾರ ಬೆಳಗ್ಗೆ ಗುಂಡಿನ ಕಾಳಗ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರದೇಶದಲ್ಲಿ ವಿಭಾಗೀಯ ಸಮಿತಿ ಸದಸ್ಯ ಬೆಡ್ಜಾ ಉಪಸ್ಥಿತಿಯ ಕುರಿತ ಮಾಹಿತಿಯ ಆಧಾರದಲ್ಲಿ ಆರಂಭಿಸಲಾದ ಕಾರ್ಯಾಚರಣೆಯಲ್ಲಿ ವಿಶೇಷ ಕಾರ್ಯ ಪಡೆ ಹಾಗೂ ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ (ಎರಡೂ ಚತ್ತೀಸ್‌ಗಢ ಪೊಲೀಸ್‌ನ ಘಟಕ) ಹಾಗೂ ಕೋಬ್ರಾ (ಕಮಾಂಡೊ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆ್ಯಕ್ಷನ್-ಸಿಆರ್‌ಪಿಎಫ್‌ನ ಘಟಕ) ಕ್ಕೆ ಸೇರಿದ ಸಿಬ್ಬಂದಿ ಪಾಲ್ಗೊಂಡರು.
ಗುಂಡಿನ ಕಾಳಗದಲ್ಲಿ ಮೃತಪಟ್ಟ ಇನ್ನೋರ್ವನ ಗುರುತು ಇದುವರೆಗೆ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
‘‘ಘಟನಾ ಸ್ಥಳದಲ್ಲಿ ಇದುವರೆಗೆ ಇಬ್ಬರು ನಕ್ಸಲೀಯರ ಮೃತದೇಹಗಳು ಹಾಗೂ ಎ.ಕೆ. 47 ರೈಫಲ್‌ಗಳು ಪತ್ತೆಯಾಗಿವೆ. ಶೋಧ ಕಾರ್ಯಾಚರಣೆ ಮುಂದುವರಿದಿದೆ’’ ಎಂದು ಅವರು ತಿಳಿಸಿದ್ದಾರೆ.
ಮಾವೋವಾದಿಗಳ ರಾಷ್ಟ್ರೀಯ ಉದ್ಯಾನವನ ಪ್ರದೇಶ ಸಮಿತಿಯಲ್ಲಿ ಬೆಡ್ಜಾ ಸಕ್ರಿಯನಾಗಿದ್ದ. ಈತ ಹಲವು ದಾಳಿಗಳಲ್ಲಿ ಭಾಗಿಯಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.