×
Ad

ಅತ್ಯಾಚಾರ ಆರೋಪ| ರಾಹುಲ್ ಮಾಂಕೂಟತ್ತಿಲ್‌ ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

Update: 2026-01-17 20:50 IST

ರಾಹುಲ್ ಮಾಂಕೂಟತ್ತಿಲ್‌ | Photo Credit : PTI 

ತಿರುವನಂತಪುರ,ಜ.17: ಅತ್ಯಾಚಾರ ಹಾಗೂ ಕ್ರಿಮಿನಲ್ ಬೆದರಿಕೆಯ ಆರೋಪಗಳಿಗೆ ಸಂಬಂಧಿಸಿ ಬಂಧಿತರಾಗಿರುವ ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ಜಾಮೀನು ಕೋರಿ ಸಲ್ಲಿಸಿದ ಅರ್ಜಿಯನ್ನು ತಿರುವಲ್ಲಾದ ಪ್ರಥಮ ದರ್ಜೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯ-1 ಶನಿವಾರ ತಿರಸ್ಕರಿಸಿದೆ.

ದೂರುದಾರ ಮಹಿಳೆಯ ಜೊತೆಗಿನ ತನ್ನ ಸಂಬಂಧವು ಪರಸ್ಪರ ಸಹಮತದ್ದಾಗಿತ್ತು ಹಾಗೂ ಆಕೆಯ ಸಮ್ಮತಿಯೂ ಇತ್ತು ಎಂಬ ರಾಹುಲ್ ಮಾಂಕೂಟತ್ತಿಲ್ ಅವರ ವಾದವನ್ನು ಪುರಸ್ಕರಿಸಲು ಮುನ್ಸಿಫ್ ಮ್ಯಾಜಿಸ್ಟ್ರೇಟ್ ಅರುಂಧತಿ ದಿಲೀಪ್ ಅವರು ನಿರಾಕರಿಸಿದ್ದಾರೆ. ರಾಹುಲ್ ಹಾಗೂ ಸಂತ್ರಸ್ತೆಯ ನಡುವೆ ಸ್ನೇಹಯುತ ಹಾಗೂ ಪರಸ್ಪರ ಸಮ್ಮತಿ ಪೂರ್ವಕವಾದ ಸಂಬಂಧವಿತ್ತೆಂಬುದನ್ನು ದೃಢಪಡಿಸುವ ಚಾಟ್‌ಗಳನ್ನು ಹಾಗೂ ಆಡಿಯೋ ಸಂಭಾಷಣೆಗಳನ್ನು ಕೂಡಾ ಆರೋಪಿ ಪರ ವಕೀಲರು ಹಾಜರುಪಡಿಸಿದ್ದರು.

ಪ್ರಾಸಿಕ್ಯೂಶನ್ ವಕೀಲರು, ರಾಹುಲ್ ಮಾಂಕೂಟತ್ತಿಲ್ ಅವರಿಗೆ ಜಾಮೀನು ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದರು. ಆರೋಪಿಯು ಅಪರಾಧ ಪ್ರವೃತ್ತಿಯವರೆಂದು ಆಪಾದಿಸಿದರು. ಒಂದು ವೇಳೆ ಮಾಂಕೂಟತ್ತಿಲ್ ಅವರಿಗೆ ಜಾಮೀನು ನೀಡಿದರೆ ಅವರು ಸಂತ್ರಸ್ತೆಯ ಮೇಲೆ ಪ್ರಭಾವ ಬೀರುವ ಮತ್ತು ಸಾಕ್ಷ್ಯಗಳನ್ನು ನಾಶಪಡಿಸುವ ಅಪಾಯವಿದೆಯೆಂದು ಹೇಳಿದರು.

ಈ ನಡುವೆ ರಾಹುಲ್ ಅವರು ಜಾಮೀನಿನಲ್ಲಿ ಬಿಡುಗಡೆ ಕೋರಿ ಪಟ್ಟಣಂತಿಟ್ಟ ಜಿಲ್ಲಾ ನ್ಯಾಯಾಲಯದಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಲಿದ್ದಾರೆ.

ಮೂರನೇ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಮಾಂಕೂಟತ್ತಿಲ್ ಅವರನ್ನು ರವಿವಾರ ಬಂಂಧಿಸಲಾಗಿತ್ತು. ಅವರಿಗೆ ತಿರುವಲ್ಲಾ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನ್ಯಾಯಾಂಗ ಕಸ್ಟಡಿಯನ್ನು ವಿಧಿಸಿತ್ತು. ವಿದೇಶದಲ್ಲಿ ನೆಲೆಸಿರುವ ಕೊಟ್ಟಾಯಂನ ಮಹಿಳೆಯೊಬ್ಬರು ನೀಡಿದ ದೂರನ್ನು ಆಧರಿಸಿ ಈ ಪ್ರಕರಣವನ್ನು ದಾಖಲಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News