114 ರಫೇಲ್ ಯುದ್ಧವಿಮಾನಗಳ ಖರೀದಿಗೆ ರಕ್ಷಣಾ ಖರೀದಿ ಮಂಡಳಿ ಅಸ್ತು
Photo Credit : PTI
ಹೊಸದಿಲ್ಲಿ,ಜ.17: ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್‌ನಿಂದ 114 ರಫೇಲ್ ಯುದ್ಧವಿಮಾನಗಳ ಖರೀದಿ ಪ್ರಸ್ತಾವಕ್ಕೆ ರಕ್ಷಣಾ ಖರೀದಿ ಮಂಡಳಿಯು ಶುಕ್ರವಾರ ಹಸಿರು ನಿಶಾನೆಯನ್ನು ತೋರಿಸಿದೆ.
ಪ್ರಸ್ತಾವವನ್ನು ಈಗ ಅನುಮೋದನೆಗಾಗಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅಧ್ಯಕ್ಷತೆಯ ರಕ್ಷಣಾ ಸ್ವಾಧೀನ ಮಂಡಳಿಗೆ ಸಲ್ಲಿಸಲಾಗುವುದು. ಅಂತಿಮ ಒಪ್ಪಿಗೆಯನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆ ಕುರಿತ ಸಂಪುಟ ಸಮಿತಿಯು ನೀಡಬೇಕಾಗುತ್ತದೆ.
ಈಗಾಗಲೇ 36 ರಫೇಲ್ ಯುದ್ಧವಿಮಾನಗಳನ್ನು ಹೊಂದಿರುವ ಭಾರತೀಯ ವಾಯುಪಡೆಯು ಕಳೆದ ವರ್ಷ 114 ಹೆಚ್ಚುವರಿ ರಫೇಲ್ ವಿಮಾನಗಳನ್ನು ಕೋರಿ ರಕ್ಷಣಾ ಸಚಿವಾಲಯಕ್ಕೆ ಔಪಚಾರಿಕ ಪ್ರಸ್ತಾವವನ್ನು ಸಲ್ಲಿಸಿತ್ತು.
ಮೂಲಗಳ ಪ್ರಕಾರ ಭಾರತ ಮತ್ತು ಫ್ರಾನ್ಸ್ ಮುಂದಿನ ತಿಂಗಳಿನಲ್ಲೇ 114 ಯುದ್ಧವಿಮಾನಗಳ ಅಂತಿಮ ಒಪ್ಪಂದಕ್ಕೆ ಸಹಿ ಹಾಕಬಹುದು.
ಕಳೆದ ವರ್ಷದ ಎಪ್ರಿಲ್‌ನಲ್ಲಿ ಭಾರತವು ಭಾರತೀಯ ನೌಕಾಪಡೆಯ ಬಲವರ್ಧನೆಗಾಗಿ 26 ರಫೇಲ್-ಸಾಗರ ಯುದ್ಧ ವಿಮಾನಗಳ ಖರೀದಿಗಾಗಿ ಫ್ರಾನ್ಸ್‌ನೊಂದಿಗೆ 63,000 ಕೋ.ರೂ.ಗಳ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿತ್ತು.
ಖರೀದಿಯು ಅಂತರ್-ಸರಕಾರಿ ಒಪ್ಪಂದದಡಿ ನಡೆಯಲಿದ್ದು,ಇದು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರ ಪೂರೈಕೆಗಳನ್ನು ಖಚಿತಪಡಿಸುತ್ತದೆ. 22 ಒಂಟಿ ಆಸನಗಳ ಯುದ್ಧವಿಮಾನಗಳು ಮತ್ತು ಅವಳಿ ಆಸನಗಳ ನಾಲ್ಕು ತರಬೇತಿ ವಿಮಾನಗಳಿಗಾಗಿ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, 2031ರ ವೇಳೆಗೆ ಪೂರೈಕೆಗಳು ಪೂರ್ಣಗೊಳ್ಳುವ ನಿರೀಕ್ಷೆಯಿದೆ.
ಜೂನ್‌ನಲ್ಲಿ ಡಸಾಲ್ಟ್ ಏವಿಯೇಷನ್ ಮತ್ತು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿ.(ಟಿಎಎಸ್) ಭಾರತದಲ್ಲಿ ರಫೇಲ್ ಯುದ್ಧವಿಮಾನದ ಫ್ಯೂಸ್‌ಲೇಜ್ (ದೇಹಭಾಗ) ತಯಾರಿಕೆಗಾಗಿ ನಾಲ್ಕು ಉತ್ಪಾದನೆ ವರ್ಗಾವಣೆ ಒಪ್ಪಂದಗಳಿಗೆ ಸಹಿ ಹಾಕಿದ್ದವು. ಇದು ದೇಶದ ವೈಮಾನಿಕ ಉತ್ಪಾದನಾ ಸಾಮರ್ಥ್ಯಗಳನ್ನು ಬಲಗೊಳಿಸುವಲ್ಲಿ ಮತ್ತು ಜಾಗತಿಕ ಪೂರೈಕೆ ಸರಪಳಿಗಳನ್ನು ಬೆಂಬಲಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಮೊದಲ ಫ್ಯೂಸಲೇಜ್ ಭಾಗಗಳು ವಿತ್ತವರ್ಷ 2028ರಲ್ಲಿ ಸಿದ್ಧಗೊಳ್ಳುವ ನಿರೀಕ್ಷೆಯಿದ್ದು, ಪ್ರತಿ ತಿಂಗಳು ಎರಡು ಸಂಪೂರ್ಣ ಫ್ಯೂಸಲೇಜ್‌ಗಳು ಹೊರಬರುವ ನಿರೀಕ್ಷೆಯಿದೆ.
ರಫೇಲ್ ಯುದ್ಧವಿಮಾನಗಳ ಫ್ಯೂಸಲೇಜ್‌ನ ಪ್ರಮುಖ ರಚನಾತ್ಮಕ ವಿಭಾಗಗಳ ತಯಾರಿಕೆಗಾಗಿ ಟಿಎಎಸ್ ಹೈದರಾಬಾದ್‌ನಲ್ಲಿ ಅತ್ಯಾಧುನಿಕ ಉತ್ಪಾದನಾ ಸೌಲಭ್ಯವನ್ನು ಸ್ಥಾಪಿಸಲಿದೆ.