×
Ad

ಜಾರ್ಖಂಡ್‌ನಲ್ಲಿ ವಲಸೆ ಕಾರ್ಮಿಕನ ಹತ್ಯೆ: ಮುರ್ಷಿದಾಬಾದ್‌ನಲ್ಲಿ ಮತ್ತೆ ಪ್ರತಿಭಟನೆ

Update: 2026-01-17 23:44 IST

PC | ANI

ಕೋಲ್ಕತಾ, ಜ. 17: ಜಾರ್ಖಂಡ್‌ನಲ್ಲಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕನ ಹತ್ಯೆಯ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಜನರು ಶನಿವಾರ ಮತ್ತೆ ಸಮೀಪದ ರೈಲು ಹಳಿ ಹಾಗೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಬಾಂಗ್ಲಾದೇಶಿ ಪ್ರಜೆಗಳೆಂದು ಆರೋಪಿಸಿ ಪಶ್ಚಿಮಬಂಗಾಳದ ವಲಸೆ ಕಾರ್ಮಿಕರ ಮೇಲೆ ಇತ್ತೀಚೆಗೆ ಹೆಚ್ಚುತ್ತಿರುವ ಹಲ್ಲೆಯನ್ನು ಖಂಡಿಸಿ ನಡೆಯುತ್ತಿರುವ ಸರಣಿ ಪ್ರತಿಭಟನೆಯ ಭಾಗವಾಗಿ ಈ ಪ್ರತಿಭಟನೆ ನಡೆದಿದೆ. ಹಿಂಸಾಚಾರ ಸಂಭವಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಶನಿವಾರ ಮುರ್ಷಿದಾಬಾದ್‌ನ ಬೆಲಡಂಗಾ ಪ್ರದೇಶದಲ್ಲಿ ಬಿಗಿ ಭದ್ರತೆ ಏರ್ಪಡಿಸಲಾಗಿತ್ತು.

ಬೆಲಡಂಗಾ ನಿವಾಸಿ 35 ವರ್ಷದ ಅಲ್ಲಾವುದ್ದೀನ್ ಶೇಖ್ ಅವರು ಕಳೆದ ಐದು ವರ್ಷಗಳಿಂದ ಜಾರ್ಖಂಡ್‌ನ ಪಲಾಮು ಜಿಲ್ಲೆಯ ಬಿಶ್ರಾಮಪುರ ಪ್ರದೇಶದಲ್ಲಿ ವ್ಯಾಪಾರಿಯಾಗಿ ಕೆಲಸ ಮಾಡುತ್ತಿದ್ದರು. ವಲಸೆ ಕಾರ್ಮಿಕರಾಗಿದ್ದ ಅವರಿಗೆ ಮೂರು ವರ್ಷದ ಮಗಳಿದ್ದಳು. ರಜೆಯಲ್ಲಿದ್ದ ಶೇಖ್ ಅವರು ಕೆಲವು ದಿನಗಳ ಹಿಂದೆ ಕೆಲಸಕ್ಕೆ ಹಿಂದಿರುಗಿದ್ದರು. ಕೆಲಸಕ್ಕೆ ಮರಳಿದ ಕೆಲವೇ ದಿನಗಳಲ್ಲಿ ಅವರನ್ನು ಬಾಂಗ್ಲಾದೇಶದ ಪ್ರಜೆ ಎಂದು ಶಂಕಿಸಿ ಹತ್ಯೆಗೈಯಲಾಗಿದೆ.

ಅಲಾವುದ್ದೀನ್ ಅವರ ಸಾವಿನ ಸುದ್ದಿ ಮುರ್ಷಿದಾಬಾದ್‌ಗೆ ತಲುಪಿದ ಬಳಿಕ ಸುಜಾಪುರ-ಮಹೇಶ್‌ಪುರ ಪ್ರದೇಶದ ನಿವಾಸಿಗಳು ಬೆಲಡಂಗಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಮಹೇಶಪುರದಲ್ಲಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಬೆಳಗ್ಗೆ ಸುಮಾರು 8 ಗಂಟೆಗೆ ವಾಹನ ಸಂಚಾರಕ್ಕೆ ತಡೆ ಒಡ್ಡಿ ಪ್ರತಿಭಟನೆ ನಡೆಸಿದ್ದರು.

ರಾಷ್ಟ್ರೀಯ ಹೆದ್ದಾರಿ 12ರ ಜೊತೆಗೆ ಮಹೇಶಪುರದ ರೈಲ್ವೆ ಲೈನ್‌ನಲ್ಲಿ ರೈಲು ಹಳಿಗಳಲ್ಲಿ ಮರದ ದಿಮ್ಮಿಗಳನ್ನು ಇರಿಸಿ ರೈಲು ಸಂಚಾರಕ್ಕೆ ತಡೆ ಒಡ್ಡಿದ್ದರು. ಇದರಿಂದ ಲಾಲಗೋಲಾದಿಂದ ರಾನಾಘಾಟ್‌ಗೆ ಸಂಚರಿಸುತ್ತಿದ್ದ ಲೋಕಲ್ ರೈಲನ್ನು ಮಾರ್ಗ ಮಧ್ಯದಲ್ಲೇ ನಿಲ್ಲಿಸಲಾಗಿತ್ತು. ಇತರ ರೈಲುಗಳನ್ನು ಸಂತರಾಗಾಚಿ ಹಾಗೂ ಬೆರಹಾಮಪುರ ರೈಲು ನಿಲ್ದಾಣಗಳಲ್ಲಿ ನಿಲ್ಲಿಸಲಾಗಿತ್ತು. ಸಿಯಾಲ್ದಹದಿಂದ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ರೈಲುಗಳು ಬೆಲಡಂಗ ರೈಲು ನಿಲ್ದಾಣಕ್ಕೆ ಮಾತ್ರ ತಲುಪಲು ಸಾಧ್ಯವಾಗಿತ್ತು. ಕೃಷ್ಣನಗರ-ಲಾಲ ಗೋಲ ಲೈನ್‌ನಲ್ಲಿ ರೈಲುಗಳ ಸಂಚಾರವನ್ನು ನಿಲ್ಲಿಸಲಾಗಿತ್ತು.

ಶನಿವಾರ ಬಿದಿರು ದೊಣ್ಣೆಗಳೊಂದಿಗೆ ದಾಂಧಲೆ ನಡೆಸಿದ ಪ್ರತಿಭಟನಕಾರರು ರಸ್ತೆ ಬದಿಯ ಬ್ಯಾನರ್ ಹಾಗೂ ಫ್ಲೆಕ್ಸ್‌ಗಳನ್ನು ಕಿತ್ತು ಹಾಕಿದರು. ಹತ್ತಿರದ ಬರುವಾ ಕ್ರಾಸಿಂಗ್‌ನಲ್ಲಿ ಕೂಡ ಸಂಚಾರಕ್ಕೆ ತಡೆ ಒಡ್ಡಿದರು. ರೈಲ್ವೇ ಗೇಟ್‌ನ ಸಮೀಪ ಇದ್ದ ಹಲವು ಅಂಗಡಿಗಳಿಗೆ ಹಾನಿ ಉಂಟು ಮಾಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News