ಇಂದೋರ್‌ಗೆ ರಾಹುಲ್ ಗಾಂಧಿ ಭೇಟಿ: ಕಲುಷಿತ ನೀರು ಕುಡಿದು ಮೃತರ ಕುಟುಂಬಸ್ಥರ ಜೊತೆ ಮಾತುಕತೆ
PC | x.com/RahulGandhi
ಇಂದೋರ್, ಜ. 17: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಇಂದೋರ್‌ಗೆ ಆಗಮಿಸಿದರು ಹಾಗೂ ಕಲುಷಿತ ನೀರು ಕುಡಿದು ವಾಂತಿ, ಅತಿಸಾರ ಬಾಧಿಸಿ ಪ್ರಾಣ ಕಳೆದುಕೊಂಡವರ ಕುಟುಂಬಗಳ ಸದಸ್ಯರು ಹಾಗೂ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾದರು.
ಇಂದೋರ್‌ನ ಬಾಂಬೆ ಆಸ್ಪತ್ರೆಗೆ ತೆರಳಿದ ರಾಹುಲ್ ಗಾಂಧಿ ಕಲುಷಿತ ನೀರು ಕುಡಿದು ವಾಂತಿ ಹಾಗೂ ಅತಿಸಾರ ಬಾಧಿಸಿ ಚಿಕಿತ್ಸೆ ಪಡೆಯುತ್ತಿರುವವರು ಹಾಗೂ ಅವರ ಕುಟುಂಬಗಳ ಸದಸ್ಯರನ್ನು ಭೇಟಿಯಾದರು.
ಸಂತ್ರಸ್ತ ಕುಟುಂಬಗಳಿಗೆ ಬೆಂಬಲವಾಗಿ ನಿಲ್ಲುವ ಹಾಗೂ ತಳಮಟ್ಟದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಉದ್ದೇಶವನ್ನು ರಾಹುಲ್ ಗಾಂಧಿ ಅವರ ಈ ಭೇಟಿ ಹೊಂದಿತ್ತು. ಭಗೀರಥಪುರಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ, ಕಲುಷಿತ ನೀರು ಕುಡಿದು ಮೃತಪಟ್ಟವರ ಕುಟುಂಬಗಳ ಸದಸ್ಯರಿಗೆ ಸಾಂತ್ವನ ಹೇಳಿದರು.
ಮಧ್ಯಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ಪಟ್ವಾರಿ, ನಿಂದನೆ ಹಾಗೂ ಪ್ರತಿ ನಿಂದನೆಯ ರಾಜಕೀಯದಲ್ಲಿ ತೊಡಗಿರುವುದಕ್ಕಾಗಿ ರಾಜ್ಯದಲ್ಲಿರುವ ಬಿಜೆಪಿ ಸರಕಾರವನ್ನು ತರಾಟೆಗೆ ತೆಗದುಕೊಂಡರು.
ಮಧ್ಯಪ್ರದೇಶವನ್ನು 20 ವರ್ಷಗಳಿಗೂ ಹೆಚ್ಚು ಕಾಲ ಆಳಿದ ಬಿಜೆಪಿಗೆ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಆದರೆ, ರಾಹುಲ್ ಗಾಂಧಿ ಅವರಿಗೆ ಸಂತ್ರಸ್ತರ ನೋವನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ ನವ ಭಾರತದಲ್ಲಿ ಜನರಿಗೆ ಕುಡಿಯುವ ನೀರನ್ನು ಪೂರೈಸಲು ಕೂಡ ಸಾಧ್ಯವಾಗುತ್ತಿಲ್ಲ. ಆದುದರಿಂದ ಈ ಬಗ್ಗೆ ದೇಶಾದ್ಯಂತ ಧ್ವನಿ ಎತ್ತಬೇಕು ಎಂದು ಪಟ್ವಾರಿ ಹೇಳಿದರು.