ಮಧ್ಯಪ್ರದೇಶ | 16 ವರ್ಷದ ಬಾಲಕನಿಗೆ ಹಲ್ಲೆ ನಡೆಸಿ ಬೆತ್ತಲೆ ಮೆರವಣಿಗೆ
PC | gemini AI
ಭೋಪಾಲ್ ಜ. 17: ಮೂರು ತಿಂಗಳ ಹಿಂದೆ ಬಾಲಕಿಯೊಂದಿಗೆ ಪರಾರಿಯಾಗಿದ್ದ ಕಾರಣ 16 ವರ್ಷದ ಬಾಲಕನಿಗೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಬಳಿದ ಹಾಗೂ ಸುಮಾರು 1.5 ಕಿ.ಮೀ. ಬೆತ್ತಲೆ ಮೆರವಣಿಗೆ ನಡೆಸಿದ ಘಟನೆ ಮದ್ಯಪ್ರದೇಶದ ಉಜ್ಜೈನ್‌ಯಲ್ಲಿ ಗುರುವಾರ ನಡೆದಿದೆ ಎಂದು ಹೇಳಲಾಗಿದೆ.
ಘಟನೆಯ ವೀಡಿಯೊ ವೈರಲ್ ಆದ ಬಳಿಕ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಹಾಗೂ ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಬಾಲಕನೊಂದಿಗೆ ಪರಾರಿಯಾದ ಬಾಲಕಿಯ ಕುಟುಂಬದ ಸದಸ್ಯರು ಬಾಲಕನಿಗೆ ಉಜ್ಜೈನಿಯ ಪನ್ವಾಸ ಪ್ರದೇಶದಲ್ಲಿ ಹಲ್ಲೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ನಾವಿಬ್ಬರು ಮೂರು ತಿಂಗಳ ಹಿಂದೆ ಪರಾರಿಯಾಗಿದ್ದೆವು. ಎರಡು ವಾರಗಳ ಹಿಂದೆ ಹಿಂದಿರುಗಿದ್ದೆವು. ತನ್ನನ್ನು ಒಂದು ತಿಂಗಳು ಕಾಲ ಜೈಲಿಗೆ ಕಳುಹಿಸಲಾಗಿತ್ತು. ಬಾಲಕಿಯನ್ನು ಸುಧಾರಣಾ ಕೇಂದ್ರಕ್ಕೆ ಕಳುಹಿಸಲಾಗಿತ್ತು ಎಂದು ಬಾಲಕ ಹೇಳಿದ್ದಾನೆ.
‘‘ಅನಂತರ ಬಾಲಕಿಯ ಸಂಬಂಧಿಕರು ನನ್ನನ್ನು ಗಮನಿಸಿದರು ಹಾಗೂ ಬಲವಂತವಾಗಿ ವಾಹನದಲ್ಲಿ ಕರೆದುಕೊಂಡು ಹೋದರು. ಕೊಠಡಿ ಒಳಗೆ ಗಂಟೆಗಳ ಕಾಲ ಕೂಡಿ ಹಾಕಿದರು. ಅಲ್ಲಿ ನಿರ್ದಯವಾಗಿ ಥಳಿಸಿದರು. ಬೆತ್ತಲೆ ಮಾಡಿದರು. ಮುಖಕ್ಕೆ ಮಸಿ ಬಳಿದರು. ಸುಮಾರು 1.5 ಕಿ.ಮೀ. ಮೆರವಣಿಗೆ ಮಾಡಿದರು. ಪೊಲೀಸರಿಗೆ ಅನಂತರ ಈ ಬಗ್ಗೆ ತಿಳಿಯಿತು. ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ’’ ಎಂದು ಬಾಲಕ ಹೇಳಿದ್ದಾನೆ.
ಬಾಲಕ ಶುಕ್ರವಾರ ತನ್ನ ಅಂಗವಿಕಲ ತಾಯಿಯೊಂದಿಗೆ ಉಜ್ಜೈನಿಯ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ಅನ್ನು ಸಂಪರ್ಕಿಸಿದ್ದಾನೆ. ಅಲ್ಲದೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾನೆ.
‘‘ಘಟನೆಗೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪನ್ವಾಸ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಲಾಗಿದೆ. ನಾಲ್ವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ’’ ಎಂದು ಹೆಚ್ಚುವರಿ ಎಸ್‌ಪಿ (ಉಜ್ಜೈನಿ) ಅಲೋಕ್ ಶರ್ಮಾ ತಿಳಿಸಿದ್ದಾರೆ.