ಸ್ವಘೋಷಿತ ಗೋರಕ್ಷಕರ ಕಿರುಕುಳ ವಿರೋಧಿಸಿ ಕಸಾಯಿಖಾನೆಗಳ ಮುಷ್ಕರ: ಮಹಾರಾಷ್ಟ್ರದಲ್ಲಿ ಜಾನುವಾರು ಸಂತೆಗಳು ಸ್ಥಗಿತ
► ರಸ್ತೆಗಳಲ್ಲೇ ತಮ್ಮ ಜಾನುವಾರುಗಳನ್ನು ತೊರೆಯುತ್ತಿರುವ ರೈತರು ►‘ಗೋರಕ್ಷಕರು’ ಜಾನುವಾರು ಸಾಗಣೆ ವಾಹನಗಳನ್ನು ಪರಿಶೀಲಿಸುವುದನ್ನು ತಡೆಯುವಂತೆ ಪೋಲಿಸರಿಗೆ ಅಜಿತ್ ಪವಾರ್ ಆದೇಶ
ಸಾಂದರ್ಭಿಕ ಚಿತ್ರ (PTI)
ಮುಂಬೈ: ಸ್ವಯಂಘೋಷಿತ ಗೋರಕ್ಷಕರಿಂದ ಹೆಚ್ಚುತ್ತಿರುವ ಕಿರುಕುಳಗಳನ್ನು ವಿರೋಧಿಸಿ ಮಹಾರಾಷ್ಟ್ರದಲ್ಲಿ ಕುರೇಶಿ ಸಮುದಾಯದ 10 ಲಕ್ಷಕ್ಕೂ ಅಧಿಕ ಕಸಾಯಿಗಳು ಜು.22ರಿಂದ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಪರಿಣಾಮವಾಗಿ ಸೊಲ್ಲಾಪುರ ಜಿಲ್ಲೆಯ ಅಕ್ಲುಜ್ ಮತ್ತು ಸಂಗೋಲಾ ತಾಲೂಕುಗಳಲ್ಲಿಯ ಜಾನುವಾರು ಮಾರುಕಟ್ಟೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ರೈತರು ತಮ್ಮ ಅನುತ್ಪಾದಕ ಜಾನುವಾರುಗಳನ್ನು ರಸ್ತೆಗಳಲ್ಲಿ ತೊರೆಯಲು ಆರಂಭಿಸಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ‘ಗೋರಕ್ಷಕರು’ ಜಾನುವಾರು ಸಾಗಣೆ ವಾಹನಗಳನ್ನು ಹತ್ತುವುದನ್ನು ಅಥವಾ ಪರಿಶೀಲಿಸುವುದನ್ನು ತಡೆಯುವಂತೆ ಪೋಲಿಸರಿಗೆ ಆದೇಶ ನೀಡಿದ್ದಾರೆ ಎಂದು indianexpress.com ವರದಿ ಮಾಡಿದೆ.
‘ಸರಿಯಾದ ದಾಖಲೆಗಳಿದ್ದರೂ ಸ್ವಯಂಘೋಷಿತ ಗೋರಕ್ಷಕರಿಂದ ಹಿಂಸಾಚಾರವನ್ನು ನಾವು ಎದುರಿಸುತ್ತಿದ್ದೇವೆ. ಕಾನೂನುಬದ್ಧವಾಗಿ ವ್ಯಾಪಾರ ನಡೆಸುತ್ತಿರುವ ನಮಗೆ ಯಾವುದೇ ರಕ್ಷಣೆಯಿಲ್ಲ. ಸ್ವಯಂಘೋಷಿತ ಗೋರಕ್ಷಕರಿಂದ ನಮಗೆ ಕಿರುಕುಳ ಹೆಚ್ಚುತ್ತಿರುವುದರಿಂದ ವ್ಯಾಪಾರವನ್ನು ನಿಲ್ಲಿಸಲು ನಾವು ನಿರ್ಧರಿಸಿದ್ದೇವೆ’ ಎಂದು ಅಖಿಲ ಭಾರತ ಜಮೀಯತುಲ್ ಕುರೇಶಿ ಮತ್ತು ಜಾನುವಾರು ವ್ಯಾಪಾರಿಗಳ ಒಕ್ಕೂಟದ ಸದಸ್ಯ ಅಫ್ಸರ್ ಕುರೇಶಿ ಹೇಳಿದರು.
‘ಸ್ಥಳೀಯ ಪೋಲಿಸರು ಕೆಲವೊಮ್ಮೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ(ಎಂಕೋಕಾ)ಯ ಕಠಿಣ ನಿಬಂಧನೆಗಳನ್ನು ನಮ್ಮ ವಿರುದ್ಧ ಹೇರುತ್ತಾರೆ. ನ್ಯಾಯಾಲಯದ ತೀರ್ಪು ನಮ್ಮ ಪರವಾಗಿದ್ದರೂ ಜಾನುವಾರುಗಳನ್ನು ಬಿಡುಗಡೆ ಮಾಡಲು ನಮ್ಮಿಂದ ಲಂಚವನ್ನು ಕೇಳಲಾಗುತ್ತದೆ’ ಎಂದ ಕುರೇಶಿ, ‘ನಮ್ಮ ಸಂಘದ ಸದಸ್ಯರು ಜಾನುವಾರುಗಳನ್ನು ಸಾಗಿಸುವಾಗ ಹೆದ್ದಾರಿಗಳಲ್ಲಿ ಸ್ವಯಂಘೋಷಿತ ಗೋರಕ್ಷಕರು ವಾಹನಗಳಲ್ಲಿ ತಡೆಯುತ್ತಾರೆ. ನಮ್ಮ ಬಳಿ ಸೂಕ್ತ ದಾಖಲೆಗಳಿದ್ದರೂ ನಮ್ಮ ಜಾನುವಾರುಗಳನ್ನು ವಶಪಡಿಸಿಕೊಳ್ಳುತ್ತಾರೆ. ಉದ್ದೇಶಪೂರ್ವಕವಾಗಿ ನಮ್ಮ ವಾಹನಗಳಿಗೆ ಹಾನಿಯುಂಟು ಮಾಡಲಾಗುತ್ತಿದೆ’ ಎಂದು ತಿಳಿಸಿದರು.
25 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ಕುರೇಶಿ ಸಮುದಾಯವು ರಾಜ್ಯಾದ್ಯಂತ ಹರಡಿಕೊಂಡಿದ್ದು, ಈ ಪೈಕಿ ಗಣನೀಯ ಭಾಗವು ಜಾನುವಾರು ಮತ್ತು ಮಾಂಸ ವ್ಯಾಪಾರದಲ್ಲಿ ತೊಡಗಿಕೊಂಡಿದೆ ಎಂದ ಕುರೇಶಿ, 2015ರಲ್ಲಿ ದೇವೇಂದ್ರ ಫಡ್ನವೀಸ್ ನೇತೃತ್ವದ ಬಿಜೆಪಿ-ಶಿವಸೇನೆ ಸರಕಾರವು ಗೋಹತ್ಯೆಯನ್ನು ನಿಷೇಧಿಸಲು ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ ಕಾಯ್ದೆ,1976ಕ್ಕೆ ತಿದ್ದುಪಡಿ ತಂದಾಗಿನಿಂದ ಎತ್ತುಗಳು ಮತ್ತು ಬರಡು ಜಾನುವಾರುಗಳ ವ್ಯಾಪಾರ ಸಂಪೂರ್ಣವಾಗಿ ಕುಸಿದಿದೆ. ಇದೊಂದೇ ಕ್ರಮವು ಐದು ಲಕ್ಷಕ್ಕೂ ಅಧಿಕ ಸಾಂಪ್ರದಾಯಿಕ ಕಸಾಯಿಗಳನ್ನು ವ್ಯವಹಾರದಿಂದ ಹೊರದಬ್ಬಿದೆ ಎಂದರು.
‘ಸಂವಿಧಾನವು ಜೀವನೋಪಾಯದ ಹಕ್ಕನ್ನು ಖಾತರಿಪಡಿಸಿದ್ದರೂ ಪ್ರಸ್ತುತ ವಾತಾವರಣದಲ್ಲಿ ಅದಕ್ಕೆ ನಮಗೆ ಅವಕಾಶ ನೀಡಲಾಗುತ್ತಿಲ್ಲ. ಹಿರಿಯ ಸಂಪುಟ ಸಚಿವರು ಜಾನುವಾರು ವ್ಯಾಪಾರಿಗಳ ವಿರುದ್ಧ ಕ್ರಮಕ್ಕೆ ಕರೆ ನೀಡಿದ್ದಾರೆ’ ಎಂದು ಹೇಳಿದ ಕುರೇಶಿ, ಜಾನುವಾರು ವ್ಯಾಪಾರದೊಂದಿಗೆ ಗುರುತಿಸಿಕೊಡಿರುವ ಬಹುತೇಕ ಎಲ್ಲರೂ ತಮ್ಮ ಧರ್ಮದ ಕಾರಣದಿಂದಾಗಿ ಸುಲಭದ ಗುರಿಗಳಾಗಿದ್ದಾರೆ, ಅವರಿಗೆ ಯಾರದೇ ಬೆಂಬಲವೂ ಇಲ್ಲ ಎಂದರು.
ಕಸಾಯಿಗಳ ಮುಷ್ಕರವು ವಧೆಗಾಗಿ ಪ್ರಾಣಿಗಳನ್ನು ಮಾರಾಟ ಮಾಡುವ ಜಾನುವಾರು ಮಾರುಕಟ್ಟೆಗಳ ಕಾರ್ಯಾಚರಣೆಗಳ ಮೇಲೆ ತೀವ್ರ ಪರಿಣಾಮವನ್ನು ಬೀರಿದೆ. ಅಕ್ಲುಜ್ ತಾಲೂಕಿನಲ್ಲಿಯ ಜಾನುವಾರು ಮಾರುಕಟ್ಟೆಗೆ ಪ್ರತಿ ಸೋಮವಾರ ರೈತರು ತಮ್ಮ ಅನುತ್ಪಾದಕ ಕೋಣಗಳನ್ನು ಮಾರಾಟಕ್ಕೆ ತರುತ್ತಿದ್ದರು.
ಮಾರುಕಟ್ಟೆಯಲ್ಲಿ ಪ್ರತಿ ಸೋಮವಾರ ಸುಮಾರು 50 ಲಕ್ಷ ರೂ.ಗಳ ವ್ಯಾಪಾರ ನಡೆಯುತ್ತಿತ್ತು, ರಾಜ್ಯದ ಮೂಲೆ ಮೂಲೆಗಳಿಂದಲೂ ಸುಮಾರು 400-500 ಜಾನುವಾರುಗಳನ್ನು ಮಾರಾಟಕ್ಕಾಗಿ ಇಲ್ಲಿಯ ಮಾರುಕಟ್ಟೆಗೆ ತರಲಾಗುತ್ತದೆ ಎಂದು ಹೇಳಿದ ಮಾರುಕಟ್ಟೆ ಕಾರ್ಯದರ್ಶಿ ರಾಜೇಂದ್ರ ಕಾಕಡೆಯವರು, ಮುಷ್ಕರದಿಂದಾಗಿ ಮಾರುಕಟ್ಟೆ ಸಂಪೂರ್ಣವಾಗಿ ಮುಚ್ಚಿದೆ, ರೈತರಿಗೆ ತಮ್ಮ ಜಾನುವಾರುಗಳನ್ನು ರಸ್ತೆಗಳಲ್ಲಿ ತೊರೆಯುವುದನ್ನು ಬಿಟ್ಟು ಬೇರೆ ಆಯ್ಕೆಗಳಿಲ್ಲ. ಇದೇ ರೀತಿ ಸಂಗೋಲಾ ಮಾರುಕಟ್ಟೆಯೂ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಸಮಸ್ಯೆಗೆ ತ್ವರಿತ ಪರಿಹಾರ ದೊರೆಯುವ ನಿರೀಕ್ಷೆಯಲ್ಲಿದ್ದೇವೆ ಎಂದರು.