ಲಂಚ ಸ್ವೀಕರಿಸುತ್ತಿದ್ದಾಗ ಸಿಬಿಐ ಬಲೆಗೆ ಬಿದ್ದ ಆದಾಯ ತೆರಿಗೆ ಆಯುಕ್ತ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಶಾಪೂರ್ಜಿ ಪಲ್ಲೊಂಜಿ ಉದ್ಯಮ ಸಮೂಹದ ವಿರುದ್ಧದ ಪ್ರಕರಣವನ್ನು ಇತ್ಯರ್ಥಗೊಳಿಸಲು 70 ಲಕ್ಷ ರೂ. ಲಂಚ ಸ್ವೀಕರಿಸಿದ ಆರೋಪದಲಿ ಹೈದರಾಬಾದ್ ನ ಆದಾಯ ತೆರಿಗೆ (ವಿನಾಯಿತಿ) ಆಯುಕ್ತ ಜೀವನ್ ಲಾಲ್ ಲಾವಿಡಿಯಾ ಅವರನ್ನು ಸಿಬಿಐ ರವಿವಾರ ಬಂಧಿಸಿದೆ.
2004ನೇ ಸಾಲಿನ ಭಾರತೀಯ ಕಂದಾಯ ಸೇವಾ ಅಧಿಕಾರಿ.ಆದ ಲಾವಿಡಿಯಾ ಜೊತೆಗೆ ಶಾಪೂರ್‌ಜಿ ಪಲ್ಲೊಂಜಿ ಗ್ರೂಪ್‌ನ ಉಪ ಮಹಾ ಪ್ರಬಂಧಕ (ತೆರಿಗೆ ವಿಧಿಸುವಿಕೆ) ವಿರಾಲ್ ಕಾಂತಿಲಾಲ್ ಮೆಹ್ತಾ, ಸಾಯಿರಾಮ್ ಪಾಲಿಸೆಟ್ಟಿ, ನಾಟ್ಟ ವೀರಾ ನಾಗ ಶ್ರೀರಾಮ ಗೋಪಾ ಹಾಗೂ ಸಜಿದಾ ಮಝರ್ ಹುಸೈನ್ ಶಾ ಅವರನ್ನು ಕೂಡಾ ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಆದರೆ ಈ ಬಂಧನದ ಬಗ್ಗೆ ಶಾಪೂರ್ಜಿ ಪಲ್ಲೊಂಜಿ ಗ್ರೂಪ್‌ನಿಂದ ತಕ್ಷಣವೇ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
ಲಾವಿಡಿಯಾ ಹಾಗೂ ಇತರ 14 ಮಂದಿ ಆರೋಪಿಗಳು ಮತ್ತು ಸಂಸ್ತೆಗಳ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಲಂಚದ ಸುಳಿವು ಮೊದಲೇ ಸಿಕ್ಕಿದ್ದರಿಂದ ಸಿಬಿಐ ಆರೋಪಿಗಳ ವಿರುದ್ಧ ಬಲೆ ಬೀಸಿತ್ತು. ಆಯುಕ್ತ ಲಾವಿಡಿಯಾ ಅವರ ಪರವಾಗಿ ಆರೋಪಿಯೊಬ್ಬ ಮುಂಬೈನಲ್ಲಿ 70 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದಾ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಯಿತು. ಬಳಿಕ ಲಾವಿಡಿಯಾ ಮತ್ತು ಅವರ ಸಹಚರರನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಯಿತೆಂದು ಸಿಬಿಐ ವಕ್ತಾರರು ತಿಳಿಸಿದ್ದಾರೆ.
ಈ ಲಂಚದ ಮೊತ್ತದ ಜೊತೆಗೆ ಸಿಬಿಐ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿ ಮುಂಬೈ, ಹೈದರಾಬಾದ್, ಖಮ್ಮಂ, ವಿಶಾಖಪಟ್ಟಣಂ ಹಾಗೂ ಹೊಸದಿಲ್ಲಿ 18 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿ, 69 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದೆ ಎಂದು ವಕ್ತಾರು ತಿಳಿಸಿದ್ದಾರೆ.