ಅಮೆರಿಕದ ನಾಗರಿಕರಿಗೆ ಕೋಟ್ಯಂತರ ರೂ. ವಂಚನೆ: ಸೈಬರ್ ಜಾಲದ ವಿರುದ್ಧ ಸಿಬಿಐ ದಾಳಿ
ಸಾಂದರ್ಭಿಕ ಚಿತ್ರ (PTI)
ಹೊಸದಿಲ್ಲಿ: ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿದೇಶಿ ನಾಗರಿಕರಿಗೆ, ವಿಶೇಷವಾಗಿ ಅಮೆರಿಕದ ಪ್ರಜೆಗಳಿಗೆ ನಕಲಿ ಕರೆಗಳು ಹಾಗೂ VoIP ತಂತ್ರಜ್ಞಾನದ ಮೂಲಕ ಕೋಟ್ಯಂತರ ರೂಪಾಯಿಗಳನ್ನು ವಂಚಿಸುತ್ತಿದ್ದ ಅಂತಾರಾಷ್ಟ್ರೀಯ ಸೈಬರ್ ಅಪರಾಧ ಜಾಲದ ಮೂವರನ್ನು CBI ಶುಕ್ರವಾರ ಬಂಧಿಸಿದೆ.
ಗುರುವಾರ ಹಾಗೂ ಶುಕ್ರವಾರದಂದು ಪುಣೆ ಮತ್ತು ಮುಂಬೈನ ಏಳು ಬೇರೆ ಬೇರೆ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ ಸಿಬಿಐ, ಈ ವೇಳೆ 27 ಮೊಬೈಲ್ ಫೋನ್‌ಗಳು, 17 ಲ್ಯಾಪ್‌ಟಾಪ್‌ಗಳು, 1.60 ಲಕ್ಷ ರೂಪಾಯಿ ನಗದು ಹಾಗೂ 150 ಗ್ರಾಂ ಶಂಕಿತ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಬಂಧಿತರನ್ನು ಅಮಿತ್ ದುಬೆ, ತರುಣ್ ಶೆಣೈ, ಗೊನ್ಸಾಲ್ವೆಸ್ ಸವಿಯೊ ಎಂದು ಗುರುತಿಸಲಾಗಿದೆ. ಈ ಮೂವರನ್ನು ಮುಂಬೈನ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಜುಲೈ 30 ರವರೆಗೆ ಆರೋಪಿಗಳನ್ನು ಸಿಬಿಐ ಕಸ್ಟಡಿಗೆ ಒಪ್ಪಿಸಿದೆ.
ಮೊಬೈಲ್ ಫೋನ್ ಪರಿಶೀಲನೆ ನಡೆಸಿದಾಗ, ಒಬ್ಬ ಆರೋಪಿಯ ಬಳಿ 6.94 ಲಕ್ಷ ಮೌಲ್ಯದ ಕ್ರಿಪ್ಟೋಕರೆನ್ಸಿ ಪತ್ತೆಯಾಗಿದೆ. ಇನ್ನೋರ್ವ ಆರೋಪಿಯ ನಿವಾಸದಲ್ಲಿ ಶೋಧ ನಡೆಸಿದಾಗ 9.60 ಲಕ್ಷ ರೂ. ನಗದು ಪತ್ತೆಯಾಗಿದೆ. ಅಲ್ಲದೆ ಹಲವು ಡಿಜಿಟಲ್ ಪುರಾವೆಗಳು ದೊರೆತಿದ್ದು, ಈ ದಾಳಿಯು ಒಂದು ಸಂಘಟಿತ ಅಂತರರಾಷ್ಟ್ರೀಯ ಮೋಸದ ಜಾಲವನ್ನು ಬಿಚ್ಚಿಟ್ಟಿದೆ.
ಆರೋಪಿಗಳು 2025ರ ಜನವರಿಯಿಂದ ಪುಣೆಯ ವಿವಿಧ ಅಪಾರ್ಟ್‌ಮೆಂಟ್‌ಗಳಲ್ಲಿ ‘ಕಾನೂನುಬದ್ಧ’ ಕಾಲ್ ಸೆಂಟರ್‌ಗಳ ರೂಪದಲ್ಲಿ ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದರು. ಕಾಲ್ ಸೆಂಟರ್ ಸಿಬ್ಬಂದಿಗಳಿಗೆ ಹವಾಲದ ಮೂಲಕ ವೇತನ ಪಾವತಿಸುತ್ತಿದ್ದರು. ಆರೋಪಿಗಳು ಯುಎಸ್‌ಇಐಆರ್‌ಎಸ್ (ಅಮೆರಿಕದ ಕಂದಾಯ ಸೇವೆ), ಯುಎಸ್‌ಸಿಐಎಸ್( ಅಮೆರಿಕದ ಒಲಸೆ ಮತ್ತು ಪೌರ ಸೇವೆ) ಅಥವಾ ಭಾರತೀಯ ರಾಯಭಾರಿ ಸಂಸ್ಥೆಗಳ ಅಧಿಕಾರಿಗಳಂತೆ ತಮ್ಮನ್ನು ಪರಿಚಯಿಸಿ, ಕಾನೂನು ಕ್ರಮಗಳ ಹೆಸರಿನಲ್ಲಿ ವಿದೇಶಿಯರ ಮೇಲೆ ಬೆದರಿಕೆ ಒಡ್ಡುತ್ತಿದ್ದರು. ಅಲ್ಲದೆ 500 ರಿಂದ 3,000 ಡಾಲರ್ ವರೆಗಿನ ಮೊತ್ತವನ್ನು ಉಡುಗೊರೆ ಕಾರ್ಡ್ ಅಥವಾ ಕ್ರಿಪ್ಟೋಕರೆನ್ಸಿ ಮೂಲಕ ಹಣ ಸಂಗ್ರಹಿಸುತ್ತಿದ್ದರು.
ವಾಟ್ಸಾಪ್, ಸಿಗ್ನಲ್ ಹಾಗೂ ಇತರ ಅಪ್ಲಿಕೇಶನ್‌ಗಳ ಮೂಲಕ ಟೋಲ್‌ಫ್ರೀ ಸಂಖ್ಯೆಗಳ ಮೂಲಕ ಸಂತ್ರಸ್ತರನ್ನು ಸಂಪರ್ಕಿಸಿ, ಅವರನ್ನು ಮೋಸದ ಹೆಜ್ಜಾಲವಾದ ಕಾಲ್ ಸೆಂಟರ್‌ಗೆ ಕನೆಕ್ಟ್ ಮಾಡಲಾಗುತ್ತಿತ್ತು.
ಸೈಬರ್ ವಂಚನೆಯ ಮೂಲಕ ಮಾಸಿಕವಾಗಿ 3-4 ಕೋಟಿ ರೂ. ಹಣವನ್ನು ಗಳಿಸುತ್ತಿದ್ದ ಆರೋಪಿಗಳು ಅದನ್ನು ಮ್ಯೂಲ್ ಖಾತೆಗಳು, ಹವಾಲಾ ಹಾಗೂ ಕ್ರಿಪ್ಟೋಕರೆನ್ಸಿಯ ಮೂಲಕ ಅಕ್ರಮವಾಗಿ ವರ್ಗಾಯಿಸಲಾಗುತ್ತಿತ್ತು. ಕಾರ್ಯಾಚರಣೆಗೆ ಖಾಸಗಿ ಹಾಗೂ ಸಾರ್ವಜನಿಕ ಬ್ಯಾಂಕ್‌ಗಳ ಕೆಲ ಸಿಬ್ಬಂದಿಗಳು ಸಹಕರಿಸಿದ್ದರೆಂದು ಸಿಬಿಐಗೆ ಪ್ರಾಥಮಿಕ ಮಾಹಿತಿ ದೊರೆತಿದೆ ಎಂದು ತಿಳಿದು ಬಂದಿದೆ. RBI ಮಾರ್ಗಸೂಚಿಗಳನ್ನು ಉಲ್ಲಂಘಿಸಿ ನಕಲಿ KYC ದಾಖಲೆಗಳ ಆಧಾರದ ಮೇಲೆ ಬ್ಯಾಂಕ್ ಖಾತೆಗಳು ತೆರೆಯಲಾಗುತ್ತಿತ್ತು ಎನ್ನಲಾಗಿದೆ.