×
Ad

ಸಿಬಿಎಸ್‌ಇ 10/12ನೇ ತರಗತಿ ಪರೀಕ್ಷೆಗಳನ್ನು ಬರೆಯಲು ಶೇ.75ರಷ್ಟು ಹಾಜರಾತಿ ಕಡ್ಡಾಯ

Update: 2025-08-06 16:58 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: 2025-26ನೇ ಶೈಕ್ಷಣಿಕ ವರ್ಷಕ್ಕಾಗಿ 10 ಮತ್ತು 12ನೇ ತರಗತಿಗಳ ವಿದ್ಯಾರ್ಥಿಗಳಿಗೆ ಕಡ್ಡಾಯ ಹಾಜರಾತಿಯ ಕುರಿತು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ)ಯು ಅಧಿಸೂಚನೆಯನ್ನು ಹೊರಡಿಸಿದೆ. ಆ.4ರಂದು ಹೊರಡಿಸಲಾದ ಅಧಿಸೂಚನೆಯ ಪ್ರಕಾರ 2026ರ ಬೋರ್ಡ್ ಪರೀಕ್ಷೆಗಳಿಗೆ ಅರ್ಹತೆ ಪಡೆಯಲು ವಿದ್ಯಾರ್ಥಿಗಳು ಕನಿಷ್ಠ ಶೇ.75ರಷ್ಟು ಹಾಜರಾತಿಯನ್ನು ಹೊಂದಿರಬೇಕು.

ಶೇ.75ಕ್ಕಿಂತ ಕಡಿಮೆ ಹಾಜರಾತಿ ಹೊಂದಿರುವ ವಿದ್ಯಾರ್ಥಿಗಳು ನಿರ್ದಿಷ್ಟ ವಿನಾಯಿತಿಗಳಿಗೆ ಅರ್ಹತೆಯನ್ನು ಪಡೆಯದಿದ್ದರೆ ಅವರು ಬೋರ್ಡ್ ಪರೀಕ್ಷೆಗಳಿಗೆ ಹಾಜರಾಗುವುದನ್ನು ನಿಷೇಧಿಸಲಾಗುವುದು ಎಂದು ಸಿಬಿಎಸ್‌ಇ ಎಚ್ಚರಿಕೆ ನೀಡಿದೆ.

ವೈದ್ಯಕೀಯ ತುರ್ತು ಪರಿಸ್ಥಿತಿಗಳು,ಕುಟುಂಬದಲ್ಲಿ ನಿಧನ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕ್ರೀಡಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆಗೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ಸಲ್ಲಿಸುವ ವಿದ್ಯಾರ್ಥಿಗಳಿಗೆ ವಿನಾಯತಿ ನೀಡಲಾಗುವುದು.

ಹಾಜರಾತಿ ದಾಖಲೆಗಳಲ್ಲಿ ವ್ಯತ್ಯಾಸಗಳನ್ನು ತಾನು ಸಹಿಸುವುದಿಲ್ಲ ಮತ್ತು ಹಾಜರಾತಿ ದತ್ತಾಂಶಗಳ ದುರುಪಯೋಗದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಿಬಿಎಸ್‌ಇ ಒತ್ತಿ ಹೇಳಿದೆ. ಲಿಖಿತ ವಿನಂತಿಗಳಿಲ್ಲದ ರಜೆಗಳನ್ನು ಶಾಲೆಗೆ ಅನಧಿಕೃತ ಗೈರು ಹಾಜರಿ ಎಂದು ಪರಿಗಣಿಸುವುದಾಗಿ ಅದು ತಿಳಿಸಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿ ಹಾಜರಾತಿ ಮಾನದಂಡಗಳು ಮತ್ತು ಅವುಗಳನ್ನು ಪಾಲಿಸದಿದ್ದರೆ ಗಂಭೀರ ಪರಿಣಾಮಗಳ ಬಗ್ಗೆ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ತಿಳಿಸುವಂತೆ ಶಾಲೆಗಳಿಗೂ ಸೂಚಿಸಲಾಗಿದೆ.

ವಿದ್ಯಾರ್ಥಿಗಳ ಹಾಜರಾತಿ ಕೊರತೆಯ ಬಗ್ಗೆ ಪೋಷಕರಿಗೆ ನೋಂದಾಯಿತ ಇಮೇಲ್ ಅಥವಾ ಅಂಚೆ ಮೂಲಕ ಲಿಖಿತವಾಗಿ ಎಚ್ಚರಿಕೆ ನೀಡುವಂತೆಯೂ ಶಾಲೆಗಳಿಗೆ ಸೂಚಿಸಲಾಗಿದೆ.

ವೈದ್ಯಕೀಯ ರಜೆ ಅರ್ಜಿಗಳೊಂದಿಗೆ ಸರಕಾರದಿಂದ ಮಾನ್ಯತೆ ಪಡೆದ ವೈದ್ಯರ ಪ್ರಮಾಣಪತ್ರಗಳನ್ನು ಸಲ್ಲಿಸುವುದು ಅಗತ್ಯವಾಗಿದೆ. ಇತರ ಗಂಭೀರ ಕಾರಣಗಳ ಪ್ರಕರಣಗಳಲ್ಲಿ ಮರಣ ಪ್ರಮಾಣಪತ್ರಗಳು ಅಥವಾ ಅಧಿಕೃತ ಸೂಚನೆಗಳಂತಹ ದಾಖಲೆ ಸಹಿತ ಪುರಾವೆಗಳನ್ನು ಸಲ್ಲಿಸುವುದನ್ನು ಕಡ್ಡಾಯವಾಗಿಸಲಾಗಿದೆ.

ಜ.1ಕ್ಕೆ ಇದ್ದಂತೆ ಹಾಜರಾತಿಯನ್ನು ಲೆಕ್ಕ ಹಾಕಲಾಗುವುದು ಮತ್ತು ಶಾಲೆಗಳು ವಿನಾಯಿತಿಗೆ ಅರ್ಹ ಪ್ರಕರಣಗಳನ್ನು ಜ.7ರೊಳಗೆ ಸಿಬಿಎಸ್‌ಇಗೆ ವರದಿ ಮಾಡಬೇಕು.

ಸಿಬಿಎಸ್‌ಇ ಸಂಯೋಜಿತ ಶಾಲೆಗಳಲ್ಲಿ ದಿಢೀರ್ ತಪಾಸಣೆಗಳಿಗೂ ಅಧಿಕಾರ ನೀಡಿದೆ. ಹಾಜರಾತಿ ದಾಖಲೆಗಳು ಅಪೂರ್ಣವಾಗಿರುವುದು ಕಂಡು ಬಂದರೆ ಶಾಲೆಗಳ ಸಂಯೋಜನೆ ರದ್ದು ಅಥವಾ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವುದಕ್ಕೆ ಅನರ್ಹತೆ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದೂ ಸಿಬಿಎಸ್‌ಇ ಅಧಿಸೂಚನೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News