ಸಕ್ಕರೆ ಸೇವನೆ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಶಾಲೆಗಳಲ್ಲಿ ʼಶುಗರ್ ಬೋರ್ಡ್ʼ ಸ್ಥಾಪಿಸಲು ಸಿಬಿಎಸ್ಇ ಸೂಚನೆ
ಸಾಂದರ್ಭಿಕ ಚಿತ್ರ | PC : freepik.com
ಹೊಸದಿಲ್ಲಿ: ಸಕ್ಕರೆ ಸೇವನೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲು ʼಶುಗರ್ ಬೋರ್ಡ್ʼ (sugar boards) ಸ್ಥಾಪಿಸಲು ಸಿಬಿಎಸ್ಇ ಸಂಯೋಜಿತ ಶಾಲೆಗಳಿಗೆ ನಿರ್ದೇಶನ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ 10 ವರ್ಷಗಳಲ್ಲಿ ಮಕ್ಕಳಲ್ಲಿ ಟೈಪ್ 2 ಮಧುಮೇಹದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಸಿಬಿಎಸ್ಇ ಗಮನಿಸಿದೆ. ಈ ಆತಂಕಕಾರಿ ಬೆಳವಣಿಗೆಗೆ ಹೆಚ್ಚಿನ ಸಕ್ಕರೆ ಸೇವನೆಯೇ ಕಾರಣವಾಗಿದೆ. ಶಾಲಾ ಪರಿಸರದಲ್ಲಿ ಸಕ್ಕರೆ ತಿಂಡಿಗಳು, ಪಾನೀಯಗಳು ಮತ್ತು ಸಂಸ್ಕರಿಸಿದ ಆಹಾರಗಳು ಸುಲಭವಾಗಿ ಲಭ್ಯವಾಗುವುದರಿಂದ ಮಕ್ಕಳು ಹೆಚ್ಚಿನ ಪ್ರಮಾಣದಲ್ಲಿ ಸೇವನೆಗೆ ಕಾರಣವಾಗುತ್ತದೆ.
ಅತಿಯಾದ ಸಕ್ಕರೆ ಸೇವನೆ ಮಧುಮೇಹದ ಅಪಾಯವನ್ನು ಹೆಚ್ಚಿಸುವುದಲ್ಲದೆ ಬೊಜ್ಜು, ದಂತ ಸಮಸ್ಯೆಗಳು ಮತ್ತು ಇತರ ಚಯಾಪಚಯ ಅಸ್ವಸ್ಥತೆಗಳಿಗೆ ಕಾರಣವಾಗುತ್ತದೆ. ಇದು ಕೊನೆಗೆ ಮಕ್ಕಳ ಆರೋಗ್ಯದ ಮೇಲೆ ದೀರ್ಘ ಕಾಲೀನ ಪರಿಣಾಮ ಬೀರುತ್ತದೆ ಮತ್ತು ಮಕ್ಕಳ ಶೈಕ್ಷಣಿಕ ಕಾರ್ಯಕ್ಷಮತೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂದು ಸಿಬಿಎಸ್ಇ ಶಾಲಾ ಪ್ರಾಂಶುಪಾಲರಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಅತಿಯಾದ ಸಕ್ಕರೆ ಸೇವನೆಯ ಅಪಾಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವನ್ನು ಮೂಡಿಸಲು ಶುಗರ್ ಬೋರ್ಡ್ ಸ್ಥಾಪಿಸಲು ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ. ಈ ಬೋರ್ಡ್ ದೈನಂದಿನವಾಗಿ ಎಷ್ಟು ಸಕ್ಕರೆಯನ್ನು ಸೇವಿಸಬೇಕು? ಸಾಮಾನ್ಯವಾಗಿ ಸೇವಿಸುವ ಆಹಾರಗಳಲ್ಲಿನ ಸಕ್ಕರೆ ಅಂಶ, ಜಂಕ್ ಫುಡ್, ತಂಪು ಪಾನೀಯಗಳಲ್ಲಿನ ಸಕ್ಕರೆ ಅಂಶಗಳ ಬಗ್ಗೆ ಮಾಹಿತಿ ನೀಡಲಿದೆ. ಇದಲ್ಲದೆ ಹೆಚ್ಚಿನ ಸಕ್ಕರೆ ಸೇವನೆಯಿಂದ ಉಂಟಾಗುವ ಆರೋಗ್ಯದ ಅಪಾಯಗಳು ಮತ್ತು ಆಹಾರ ಆಯ್ಕೆಗಳ ಬಗ್ಗೆ ಮ್ಕಕಳಿಗೆ ಅರಿವನ್ನು ನೀಡಲಿದೆ.