ತನ್ನದೇ ಸ್ವಂತ ಸಮುದಾಯ ರೇಡಿಯೊ ಸ್ಥಾಪಿಸಲಿರುವ CBSE
Photo Credit: PTI
ಹೊಸದಿಲ್ಲಿ: ತನ್ನ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇನ್ನಿತರ ಸಿಬ್ಬಂದಿ ವರ್ಗಕ್ಕೆಂದೇ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) ತನ್ನದೇ ಸ್ವಂತ ಸಮುದಾಯ ರೇಡಿಯೊ ಸ್ಥಾಪಿಸಲು ಮುಂದಾಗಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇತ್ತೀಚೆಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದ್ದು, ಇದರ ಪರವಾನಗಿಗಾಗಿ ಅರ್ಜಿಯನ್ನು ಸಲ್ಲಿಸಲು ನಿರ್ಧರಿಸಲಾಯಿತು ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸಿಬಿಎಸ್ಇ ಅಧಿಕಾರಿಯೊಬ್ಬರು, "ಆಡಳಿತ ಮಂಡಳಿಯ ಸಭೆಯಲ್ಲಿ ಸಮುದಾಯ ರೇಡಿಯೊ ಸ್ಥಾಪಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಗಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ಸಂಬಂಧಿಸಿದ ಪಾಲುದಾರರು ಹಾಗೂ ತಜ್ಞರೊಂದಿಗೆ ಸಮಾಲೋಚನಾ ಸಭೆ ನಡೆಸಿ, ಸಮುದಾಯ ರೇಡಿಯೊ ಸ್ಥಾಪಿಸಲು ವಿಸ್ತೃತ ಪರವಾನಗಿ ಅರ್ಜಿಯನ್ನು ಸಿದ್ಧಪಡಿಸಲು ನಿರ್ಧರಿಸಲಾಯಿತು" ಎಂದು ತಿಳಿಸಿದ್ದಾರೆ.
ಇದಕ್ಕಾಗಿ ತಗಲುವ ಹಣಕಾಸು ವೆಚ್ಚವನ್ನೂ ಲೆಕ್ಕಾಚಾರ ಮಾಡಬೇಕು ಎಂದು ಮಂಡಳಿ ಸಭೆಯಲ್ಲಿ ನಿರ್ಧರಿಸಲಾಯಿತು ಎಂದೂ ಅವರು ಹೇಳಿದ್ದಾರೆ.
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಈಗಾಗಲೇ ಶಿಕ್ಷಾ ವಾಣಿ ಎಂಬ ಪಾಡ್‌ಕಾಸ್ಟ್ ನಡೆಸುತ್ತಿದ್ದು, 9-12ನೇ ತರಗತಿವರೆಗಿನ ವಿವಿಧ ವಿಷಯಗಳ ಕುರಿತು ಸರಳ ಹಾಗೂ ಸೀಮಾತೀತ ವಿಧಾನದಲ್ಲಿ ಸಕಾಲಿಕ ಆಡಿಯೊಗಳನ್ನು ಪ್ರಸಾರ ಮಾಡಲಾಗುತ್ತಿದೆ.