×
Ad

CELEBI ಗ್ರೌಂಡ್ ಸರ್ವಿಸ್ ಟೆಂಡರ್ ರದ್ದು ; ಬಾಂಬೆ ಹೈಕೋರ್ಟ್ ನಿಂದ ಮಧ್ಯಂತರ ತಡೆ

Update: 2025-05-26 20:26 IST

PC : PTI 

ಮುಂಬೈ: ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರೌಂಡ್ ಸರ್ವಿಸ್ ಹಾಗೂ ಪ್ರಯಾಣಿಕರ ಬೋರ್ಡಿಂಗ್ ಸೇತುವೆ ನಿರ್ವಹಣೆಗೆ ತುರ್ಕಿಯಾ ಮೂಲದ ಸಂಸ್ಥೆ CELEBIಗೆ ನೀಡಲಾಗಿರುವ ಗುತ್ತಿಗೆಯನ್ನು ಬದಲಿಸಲು ಕರೆಯಲಾಗಿರುವ ಟೆಂಡರ್ ಗಳ ಕುರಿತು ಅಂತಿಮ ನಿರ್ಧಾರ ಕೈಗೊಳ್ಳದಂತೆ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸಂಸ್ಥೆಗೆ ಸೋಮವಾರ ಬಾಂಬೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಜೂನ್ ತಿಂಗಳಲ್ಲಿ ನ್ಯಾಯಾಲಯವು ಮತ್ತೆ ಪ್ರಾರಂಭವಾದ ಬಳಿಕ CELEBI ಸಂಸ್ಥೆ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸುವವರೆಗೂ, ಈ ಸಂಬಂಧ ಆಹ್ವಾನಿಸಲಾಗಿರುವ ಟೆಂಡರ್ ಗಳ ಕುರಿತು ಯಾವುದೇ ಅಂತಿಮ ನಿರ್ಧಾರ ಕೈಗೊಳ್ಳಬಾರದು ಎಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸಂಸ್ಥೆಗೆ CELEBI ಸಲ್ಲಿಸಿರುವ ಅರ್ಜಿಯ ತ್ವರಿತ ವಿಚಾರಣೆ ನಡೆಸಿದ ನ್ಯಾ. ಸೋಮಶೇಖರ್ ಸುಂದರೇಶನ್ ಅವರನ್ನೊಳಗೊಂಡ ರಜಾಕಾಲದ ನ್ಯಾಯಪೀಠ ನಿರ್ದೇಶನ ನೀಡಿದೆ.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಸಂಸ್ಥೆಯೊಂದಿಗೆ ತಾನು ಮಾಡಿಕೊಂಡಿದ್ದ ಗುತ್ತಿಗೆಯನ್ನು ಅಂತ್ಯಗೊಳಿಸಿ, ತನಗೆ ನೀಡಲಾಗಿದ್ದ ಭದ್ರತಾ ಅನುಮತಿಯನ್ನು ರದ್ದುಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಕಳೆದ ವಾರ ತುರ್ಕಿಯಾ ಮೂಲದ ಗ್ರೌಂಡ್ ಸರ್ವಿಸ್ ನ ಮುಂಚೂಣಿ ಸಂಸ್ಥೆಯಾದ CELEBIಯ ಅಂಗಸಂಸ್ಥೆ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿತ್ತು.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ವೇಳೆ ತುರ್ಕಿಯಾ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದರಿಂದ, ಭಾರತದಲ್ಲಿ ಈ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ, ಭಾರತದ ವೈಮಾನಿಕ ಭದ್ರತಾ ನಿಯಂತ್ರಣಾ ಪ್ರಾಧಿಕಾರವಾದ ನಾಗರಿಕ ವಿಮಾನ ಯಾನ ಭದ್ರತಾ ದಳವು ರಾಷ್ಟ್ರೀಯ ಭದ್ರತೆಯ ನೆಲೆಯಲ್ಲಿ CELEBI ಏರ್ ಪೋರ್ಟ್ ಸರ್ವೀಸಸ್ ಇಂಡಿಯಾಗೆ ನೀಡಿದ್ದ ಭದ್ರತಾ ಅನುಮತಿಯನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ರದ್ದುಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ, ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ CELEBI ನ್ಯಾಸ್ ಏರ್ ಪೋರ್ಟ್ ಸರ್ವೀಸಸ್ ಇಂಡಿಯಾ ಸಂಸ್ಥೆ ಬಾಂಬೆ ಹೈಕೋರ್ಟ್ ನಲ್ಲಿ ಮೂರು ಮೊಕದ್ದಮೆಗಳನ್ನು ದಾಖಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News