×
Ad

ಪ್ರಾದೇಶಿಕ ಸೇನೆಯನ್ನು ಕರೆಸಲು ಸೇನಾ ಮುಖ್ಯಸ್ಥರಿಗೆ ಕೇಂದ್ರ ಅಧಿಕಾರ

Update: 2025-05-09 22:10 IST

ಹೊಸದಿಲ್ಲಿ: ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆ ಬಿಗಡಾಯಿಸುತ್ತಿರುವಂತೆಯೇ, ಪ್ರಾದೇಶಿಕ ಸೇನೆ (ಟೆರಿಟೋರಿಯಲ್ ಆರ್ಮಿ)ಯ ಸದಸ್ಯರನ್ನು ಕರೆಸಿಕೊಳ್ಳಲು ಕೇಂದ್ರ ಸರಕಾರವು ಸೇನಾ ಮುಖ್ಯಸ್ಥರಿಗೆ ಅಧಿಕಾರ ನೀಡಿದೆ. 1948ರ ಪ್ರಾದೇಶಿಕ ಸೇನಾ ಕಾಯ್ದೆಯ ನಿಯಮ 33ರಡಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಈಗ ಅಸ್ತಿತ್ವದಲ್ಲಿರುವ 32 ಪ್ರಾದೇಶಿಕ ಸೇನಾ ಕಾಲಾಳು ಬೆಟಾಲಿಯನ್‌ಗಳಿಂದ ಸದಸ್ಯರನ್ನು ಪಡೆದುಕೊಳ್ಳಲಾಗುವುದು ಮತ್ತು ಆಯ್ದ ಘಟಕಗಳನ್ನು ದಕ್ಷಿಣ, ಪೂರ್ವ, ಪಶ್ಚಿಮ, ಮಧ್ಯ, ಉತ್ತರ ಮತ್ತು ನೈರುತ್ಯ ಕಮಾಂಡ್‌ಗಳು ಹಾಗೂ ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್ ಹಾಗೂ ಸೇನಾ ತರಬೇತಿ ಕಮಾಂಡ್ ಸೇರಿದಂತೆ ವಿವಿಧ ಪ್ರಮುಖ ಸೇನಾ ವಲಯಗಳಿಗೆ ನಿಯೋಜಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಘೋಷಿಸಿದೆ.

ಎಪ್ರಿಲ್ 22ರಂದು ಭಯೋತ್ಪಾದಕರು ಪಹಲ್ಗಾಮ್‌ನಲ್ಲಿ 26 ಪ್ರವಾಸಿಗಳನ್ನು ಅಮಾನುಷವಾಗಿ ಕೊಂದಿರುವುದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಬುಧವಾರ ‘ಆಪರೇಶನ್ ಸಿಂಧೂರ’ ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ ವಿವಿಧ ಭಯೋತ್ಪಾದಕ ತರಬೇತಿ ಶಿಬಿರಗಳ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಆ ಬಳಿಕ, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆ ತಾರಕಕ್ಕೇರಿದೆ.

►ಏನಿದು ಪ್ರಾದೇಶಿಕ ಸೇನೆ?

ಪ್ರಾದೇಶಿಕ ಸೇನೆ ಎಂದರೆ ಅರೆಕಾಲಿಕ ಸ್ವಯಂಸೇವಕರನ್ನು ಒಳಗೊಂಡ ಸೇನಾ ಮೀಸಲು ಪಡೆಯಾಗಿದೆ. ಇದರ ಸದಸ್ಯರು ಭಾರತೀಯ ಸೇನೆಗೆ ಅದರ ಕಾರ್ಯಾಚರಣೆಗಳಲ್ಲಿ ನೆರವು ನೀಡುತ್ತಾರೆ. ಈ ಸೇನೆಯಲ್ಲಿ ಮೂಲ ಸೇನೆಯಲ್ಲಿರುವಂತೆ ಆಫಿಸರ್‌ಗಳು, ಜೂನಿಯರ್ ಕಮಿಶನ್ಡ್ ಆಫಿಸರ್‌ಗಳು, ನಾನ್-ಕಮಿಶನ್ಡ್ ಆಫಿಸರ್‌ಗಳು ಮತ್ತು ಇತರ ಸಿಬ್ಬಂದಿ ಇರುತ್ತಾರೆ. ಆದರೆ ಅವರೆಲ್ಲರೂ ನಾಗರಿಕ ಕ್ಷೇತ್ರದಲ್ಲಿ ಜೀವನಾಧಾರದ ಕೆಲಸಗಳನ್ನು ಹೊಂದಿದವರಾಗಿದ್ದಾರೆ.

ಪ್ರಾದೇಶಿಕ ಸೇನೆಯ ಮುಖ್ಯ ಪಾತ್ರ ತುರ್ತು ಸಂದರ್ಭಗಳಲ್ಲಿ ಭಾರತೀಯ ಸೇನೆಯನ್ನು ಅದರ ದೈನಂದಿನ ಕರ್ತವ್ಯಗಳಿಂದ ಮುಕ್ತಗೊಳಿಸುವುದು ಮತ್ತು ಅದರ ಪ್ರಧಾನ ಕರ್ತವ್ಯದಲ್ಲಿ ನೆರವು ನೀಡುವುದು.

ಪ್ರಾದೇಶಿಕ ಸೇನೆಯ ಸದಸ್ಯರಿಗೆ ಸೇನಾ ತರಬೇತಿಯನ್ನು ನೀಡಲಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News