ಒಡಿಶಾಕ್ಕೆ ಕೇಂದ್ರ ಸರಕಾರ ಸಾಕಷ್ಟು ನಿಧಿ ನೀಡುತ್ತಿಲ್ಲ: ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಆರೋಪ
ನವೀನ್ ಪಟ್ನಾಯಕ್ | Photo : PTI
ಭುವನೇಶ್ವರ: ಕೇಂದ್ರ ಸರಕಾರದಿಂದ ಒಡಿಶಾ ಸರಕಾರಕ್ಕೆ ಸಾಕಷ್ಟು ನಿಧಿ ಹಾಗೂ ಬೆಂಬಲ ಸಿಗುತ್ತಿಲ್ಲ ಎಂದು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಂಗಳವಾರ ಆರೋಪಿಸಿದ್ದಾರೆ ‘‘ರಾಜ್ಯದ ಪಾಲು ಹಾಗೂ ಕೇಂದ್ರದ ನಿಧಿ ವರ್ಗಾವಣೆಯಲ್ಲಿ ಒಡಿಶಾ ನಿರಂತರ ನಿರ್ಲಕ್ಷಕ್ಕೆ ಒಳಗಾಗುತ್ತಿದೆ’’ ಎಂದು ಗುರುವಾರ ನಡೆಯಲಿರುವ ಸಂಸತ್ತಿನ ಮುಂಗಾರು ಅಧಿವೇಶನಕ್ಕಿಂತ ಒಂದು ದಿನ ಮುನ್ನ ಬಿಜು ಜನತಾ ದಳದ ಮುಖ್ಯಸ್ಥರಾದ ನವೀನ್ ಪಟ್ನಾಯಕ್ ಪಕ್ಷದ ಸದಸ್ಯರಿಗೆ ತಿಳಿಸಿದ್ದಾರೆ.
ನಮ್ಮ ರಾಜ್ಯದ ಬಗ್ಗೆ ವಿಶೇಷ ಗಮನ ಹರಿಸುವ ಕುರಿತ ಆಗ್ರಹ ಪ್ರಬಲವಾಗಬೇಕು. ಕೇಂದ್ರ ಸರಕಾರದ ವಸತಿ ಯೋಜನೆಯಾಗಿರುವ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಡಿಶಾಕ್ಕೆ ಕೇವಲ 8 ಲಕ್ಷ ಮನೆಗಳನ್ನು ಮಾತ್ರ ಮಂಜೂರು ಮಾಡಲಾಗಿದೆ. ಒಡಿಶಾಕ್ಕೆ 15 ಲಕ್ಷ ಮನೆಗಳ ಅಗತ್ಯತೆ ಇತ್ತು ಎಂದು ಪಟ್ನಾಯಕ್ ಹೇಳಿದ್ದಾರೆ. ಪಿಎಂ ಗರೀಬ್ ಕಲ್ಯಾಣ ಯೋಜನೆ (ಉಚಿತ ಪಡಿತರ ಯೋಜನೆ)ಯನ್ನು ಕೈಬಿಟ್ಟಿರುವುದು ಹಾಗೂ ಹೆಚ್ಚುವರಿ 5 ಕೆ.ಜಿ. ಅಕ್ಕಿ ನೀಡುವುದನ್ನು ಸ್ಥಗಿತಗೊಳಿಸಿರುವುದು ಬಡವರ ಮೇಲಿನ ದಾಳಿ ಎಂದು ಅವರು ಹೇಳಿದ್ದಾರೆ.
ರಾಜ್ಯದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಕೂಡ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ನಿರ್ಲಕ್ಷಿಸುತ್ತಿದೆ ಎಂದು ಕೂಡ ಪಟ್ನಾಯಕ್ ಅವರು ಆರೋಪಿಸಿದ್ದಾರೆ. ‘‘ಹಲವು ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಘೋಷಿಸಲಾಗಿದೆ.
ಆದರೆ, ಅದರ ಕಾಮಗಾರಿ ಇದುವರೆಗೆ ಆರಂಭವಾಗಿಲ್ಲ. ಹಲವು ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಹಿಂದುಳಿದಿದೆ. ರಾಜ್ಯದ 6 ಜಿಲ್ಲೆಗಳು ಇದುವರೆಗೆ ರೈಲ್ವೆ ಜಾಲವನ್ನು ಪಡೆದಿಲ್ಲ. ಅಲ್ಲದೆ, ಕರಾವಳಿ ಹೆದ್ದಾರಿ ಇದುವರೆಗೆ ಪ್ರಗತಿಯಾಗಿಲ್ಲ. ಬ್ಯಾಂಕಿಂಗ್, ಮೊಬೈಲ್ ಹಾಗೂ ಡಿಜಿಟಲ್ ಸಂಪರ್ಕದ ಸಮಸ್ಯೆ ಕೂಡ ಇದೆ’’ ಎಂದು ಅವರು ತಿಳಿಸಿದ್ದಾರೆ.
ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸದೇ ಇರುವುದರಿಂದ ರಾಜ್ಯದಲ್ಲಿರುವ ಹಲವು ಆದಿವಾಸಿ ಸಮುದಾಯಗಳು ಸಂಕಷ್ಟವನ್ನು ಎದುರಿಸುತ್ತಿವೆ. ಹಲವು ಬಾರಿ ಮಾನವಿ ಮಾಡಿದ ಹೊರತಾಗಿಯೂ ಕೆಂಡು ಎಲೆಗಳಿಗೆ ವಿಧಿಸಲಾದ ಶೇ. 18 ಜಿಎಸ್ಟಿಯನ್ನು ಹಿಂದೆ ತೆಗೆದಿಲ್ಲ ಎಂದು ಪಟ್ನಾಯಕ್ ಹೇಳಿದ್ದಾರೆ. ಆದರೆ, ಈ ಆರೋಪಗಳು ಸುಳ್ಳು ಎಂದು ಬಿಜೆಪಿ ಹೇಳಿದೆ. ಕಳೆದ 9 ವರ್ಷಗಳಲ್ಲಿ ಒಡಿಶಾ ಕೇಂದ್ರದಿಂದ ಅತಿ ಹೆಚ್ಚು ನಿಧಿ ಸ್ವೀಕರಿಸಿದೆ ಎಂದು ಅದು ತಿಳಿಸಿದೆ.