ಚೈತನ್ಯಾನಂದ ಸುರಕ್ಷಿತ ಕಸ್ಟಡಿಯಲ್ಲಿದ್ದಾರೆ: ದಿಲ್ಲಿ ನ್ಯಾಯಾಲಯಕ್ಕೆ ತಿಹಾರ್ ಅಧಿಕಾರಿಗಳಿಂದ ವರದಿ
Photo : PTI
ಹೊಸದಿಲ್ಲಿ, ನ. 19: ದಿಲ್ಲಿಯ ಖಾಸಗಿ ಮ್ಯಾನೇಜ್‌ಮೆಂಟ್ ಕಾಲೇಜೊಂದರ 16 ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿರುವ ಸ್ವಯಂಘೋಷಿತ ದೇವಮಾನವ ಚೈತನ್ಯಾನಂದ ಸರಸ್ವತಿ ‘‘ಸುಭದ್ರ ಮತ್ತು ಸುರಕ್ಷಿತ ಕಸ್ಟಡಿಯಲ್ಲಿದ್ದಾರೆ’’ ಎಂದು ತಿಹಾರ್ ಜೈಲಿನ ಅಧಿಕಾರಿಗಳು ದಿಲ್ಲಿಯ ನ್ಯಾಯಾಲಯವೊಂದಕ್ಕೆ ತಿಳಿಸಿದ್ದಾರೆ.
ತಿಹಾರ್ ಜೈಲಿನಲ್ಲಿ ತನ್ನ ಜೀವಕ್ಕೆ ಬೆದರಿಕೆಯಿದೆ ಎಂಬುದಾಗಿ ಚೈತನ್ಯಾನಂದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅನಿಮೇಶ್ ಕುಮಾರ್‌ಗೆ ದೂರು ನೀಡಿದ್ದರು. ಮ್ಯಾನೇಜ್‌ಮೆಂಟ್ ಸಂಸ್ಥೆಯ ಮಾಜಿ ಅಧ್ಯಕ್ಷರೂ ಆಗಿರುವ ಅವರು ಸಂಸ್ಥೆಯ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಮಾಡಿರುವ ಆರೋಪದಲ್ಲಿ ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಚೈತನ್ಯಾನಂದ ಮಾಡಿರುವ ಆರೋಪಗಳ ಬಗ್ಗೆ ನಾವು ಅವರೊಂದಿಗೆ ಮಾತನಾಡಿದೆವು, ಆದರೆ ಅವರು ಯಾರ ಹೆಸರನ್ನೂ ಹೇಳಲಿಲ್ಲ ಎಂದು ಜೈಲಿನ ಅಧಿಕಾರಿಗಳು ಮಂಗಳವಾರ ಮ್ಯಾಜಿಸ್ಟ್ರೇಟರಿಗೆ ಸಲ್ಲಿಸಿದ ಸ್ಥಿತಿಗತಿ ವರದಿಯಲ್ಲಿ ಹೇಳಿದ್ದಾರೆ.
‘‘ಕೈದಿ ಈಗ ಸುರಕ್ಷಿತ ಮತ್ತು ಸುಭದ್ರ ಕಸ್ಟಡಿಯಲ್ಲಿ ಇದ್ದಾರೆ. ನಿಮಗೆ ಯಾರಾದರೂ ಕಿರುಕುಳ ನೀಡುತ್ತಿದ್ದಾರೆ ಅಥವಾ ಬೆದರಿಕೆ ಹಾಕುತ್ತಿದ್ದಾರೆ ಅನಿಸಿದಾಗ, ನೀವು ಆ ವಿಷಯವನ್ನು ತಕ್ಷಣ ಯಾವುದೇ ಜೈಲು ಅಧಿಕಾರಿ ಅಥವಾ ಈ ವರದಿಗೆ ಸಹಿ ಹಾಕಿದವರ ಗಮನಕ್ಕೆ ನೇರವಾಗಿ ತರಬಹುದು ಎಂಬುದಾಗಿ ಅವರಿಗೆ ತಿಳಿಸಲಾಗಿದೆ’’ ಎಂದು ವರದಿ ಹೇಳಿದೆ.
ಈರುಳ್ಳಿ, ಬೆಳ್ಳುಳ್ಳಿ ಇಲ್ಲದ ಊಟಕ್ಕೆ ಅನುಮತಿ
ತನಗೆ ಖಾವಿ ಬಟ್ಟೆ ತೊಡಲು ಅವಕಾಶ ನೀಡಲಾಗುತ್ತಿಲ್ಲ ಎಂಬುದಾಗಿ ಚೈತನ್ಯಾನಂದ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, ‘‘ಅವರು ಖಾವಿ ಬಟ್ಟೆ ತೊಡುವುದಕ್ಕೆ ಜೈಲಿನ ಆಕ್ಷೇಪವಿಲ್ಲ’’ ಎಂದಿದ್ದಾರೆ.
ಅವರ ಬೇಡಿಕೆಯಂತೆ, ನೀರುಳ್ಳಿ ಮತ್ತು ಬೆಳ್ಳುಳ್ಳಿ ಇಲ್ಲದ ಊಟವನ್ನು ನೀಡುವಂತೆ ಜೈಲಿನ ಅಡುಗೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ವರದಿಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.