ಪತಿಯ ಹತ್ಯೆ ಆರೋಪಕ್ಕೆ ಗುರಿಯಾಗಿದ್ದ ರಸಾಯನ ಶಾಸ್ತ್ರ ಪ್ರಾಧ್ಯಾಪಕಿಗೆ ಜೀವಾವಧಿ ಶಿಕ್ಷೆ
ಭೋಪಾಲ್: ಅಪರೂಪದ ಪ್ರಕರಣವೊಂದರಲ್ಲಿ ತಮ್ಮ ಪತಿಯ ಹತ್ಯೆಯ ಆರೋಪಕ್ಕೆ ಗುರಿಯಾಗಿದ್ದ ರಸಾಯನ ಶಾಸ್ತ್ರ ಪ್ರಾಧ್ಯಾಪಕಿಯೊಬ್ಬರಿಗೆ ಮಧ್ಯಪ್ರದೇಶ ಹೈಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ. ವಿಶೇಷವೆಂದರೆ, ಅವರು ವೈಜ್ಞಾನಿಕ ವಿವರಣೆಗಳನ್ನು ಬಳಸಿಕೊಂಡು ತಮ್ಮ ಪರ ತಾವೇ ನ್ಯಾಯಾಲಯದೆದುರು ವಾದ ಮಂಡಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ಮಧ್ಯಪ್ರದೇಶ ಹೈಕೋರ್ಟ್, 97 ಪುಟಗಳ ವಿಸ್ತೃತ ತೀರ್ಪು ಪ್ರಕಟಿಸಿದ್ದು, ಈ ಹಿಂದೆ ಜಿಲ್ಲಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. ಮಾತ್ರವಲ್ಲದೆ, ಈ ಪ್ರಕರಣದ ಅಸಹಜತೆ ಹಾಗೂ ಅದರ ಕೇಂದ್ರ ಬಿಂದುವಾಗಿದ್ದ ಮಹಿಳೆಯ ಕಾರಣಕ್ಕೆ ವ್ಯಾಪಕ ಸಾರ್ವತ್ರಿಕ ಕುತೂಹಲವನ್ನು ಮೂಡಿಸಿದೆ.
ಛತ್ತರ್ ಪುರ್ ನಲ್ಲಿ ಈ ಮುನ್ನ ರಸಾಯನ ಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದ ಮಮತಾ ಪಾಠಕ್ ಅವರು ನಿವೃತ್ತ ಸರಕಾರಿ ವೈದ್ಯರಾಗಿದ್ದ ತಮ್ಮ ಪತಿ ಡಾ. ನೀರಜ್ ಪಾಠಕ್ ರನ್ನು ಹತ್ಯೆಗೈದ ಆರೋಪದಲ್ಲಿ 2022ರಲ್ಲಿ ಶಿಕ್ಷೆಗೆ ಗುರಿಯಾಗಿದ್ದರು. ಈ ದಂಪತಿಗಳ ನಡುವೆ ಸುದೀರ್ಘ ಕಾಲದ ದಾಂಪತ್ಯ ಕಲಹವಿತ್ತು ಎಂದು ಹೇಳಲಾಗಿದ್ದು, ಡಾ. ನೀರಜ್ ಪಾಠಕ್ ಅವರು ನಿಗೂಢ ಸನ್ನಿವೇಶವೊಂದಲ್ಲಿ 2021ರಲ್ಲಿ ತಮ್ಮ ಸ್ವಗೃಹದಲ್ಲೇ ಮೃತಪಟ್ಟಿದ್ದರು. ಈ ಸಾವನ್ನು ಪೊಲೀಸರು ಆರಂಭದಲ್ಲಿ ವಿದ್ಯುದಾಘಾತದಿಂದ ಸಂಭವಿಸಿರುವ ಸಾವು ಎಂದು ದಾಖಲಿಸಿಕೊಂಡಿದ್ದರು. ಆದರೆ, ಈ ಸಾವಿನ ಕುರಿತು ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಮರಣೋತ್ತರ ಪರೀಕ್ಷೆ ವರದಿಗಳು ಅನುಮಾನ ವ್ಯಕ್ತಪಡಿಸಿದ್ದವು.
ಇದಾದ ಬಳಿಕ, ತನಿಖಾಧಿಕಾರಿಗಳು ಮಮತಾ ಪಾಠಕ್ ವಿರುದ್ಧ ಹತ್ಯೆಯ ದೋಷಾರೋಪ ಹೊರಿಸಿದ್ದರು. ವೈದ್ಯಕೀಯ ವರದಿಗಳು ಹಾಗೂ ಇನ್ನಿತರ ಸಾಕ್ಷ್ಯಾಧಾರಗಳನ್ನು ಆಧರಿಸಿ ಜಿಲ್ಲಾ ನ್ಯಾಯಾಲಯವೊಂದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಬಳಿಕ, ತಮ್ಮ ಮಾನಸಿಕ ಅಸ್ವಸ್ಥ ಪುತ್ರನ ಆರೈಕೆಗಾಗಿ ನ್ಯಾಯಾಲಯವು ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು. ಈ ಅವಧಿಯಲ್ಲಿ ಅವರು ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ, ಮಧ್ಯಪ್ರದೇಶ ಹೈಕೋರ್ಟ್ ನ ಜಬಲ್ಪುರ್ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ತಮಗಿದ್ದ ಸೀಮಿತ ಕಾನೂನು ನೆರವಿನ ಕಾರಣಕ್ಕೆ, ಅವರು ನ್ಯಾಯಾಲಯದಲ್ಲಿ ತಾವೇ ತಮ್ಮ ಪರ ವಾದ ಮಂಡಿಸಲು ನಿರ್ಧರಿಸಿದ್ದರು.
ನ್ಯಾಯಾಲಯದಲ್ಲಿ ನಡೆದ ವಿಚಾರಣೆಯ ವೇಳೆ, ಬೆಂಕಿಯ ಗಾಯಗಳು ಹಾಗೂ ವಿದ್ಯುದಾಘಾತದ ಗಾಯಗಳು ಒಂದೇ ರೀತಿಯಲ್ಲಿ ಕಂಡು ಬಂದರೂ, ಸೂಕ್ತ ರಾಸಾಯನಿಕ ವಿಶ್ಲೇಷಣೆಗಳಿಂದ ಅವುಗಳ ನಡುವಿನ ಭಿನ್ನತೆಯನ್ನು ಪತ್ತೆ ಹಚ್ಚಬಹುದಾಗಿದೆ ಎಂದು ಮಮತಾ ಪಾಠಕ್ ಅವರು ನ್ಯಾಯಾಲಯದೆದುರು ವಾದ ಮಂಡಿಸಿದ್ದರು. ಈ ವೇಳೆ ಅವರ ವಾದ ವೈಖರಿಯನ್ನು ಕಂಡು ನ್ಯಾಯಾಲಯ ಸ್ತಂಭೀಭೂತವಾಗಿತ್ತು.
“ನೀವು ರಸಾಯನ ಶಾಸ್ತ್ರದ ಪ್ರಾಧ್ಯಾಪಕರೇ?” ಎಂದು ನ್ಯಾಯಾಧೀಶರು ಪ್ರಶ್ನಿಸಿದಾಗ, ಅದಕ್ಕವರು “ಹೌದು” ಎಂದು ಪ್ರತ್ಯುತ್ತರ ನೀಡಿದ್ದರು. ಅವರ ವೈಜ್ಞಾನಿಕ ವಿವರಣೆ, ಒತ್ತಡದ ನಡುವೆಯೂ ಶಾಂತಚಿತ್ತತೆ ಹಾಗೂ ಹತ್ಯೆಗಾಗಿ ವಿಚಾರಣೆ ಎದುರಿಸುತ್ತಿದ್ದರೂ, ಮನೋಸ್ಥೈರ್ಯ ಕಳೆದುಕೊಳ್ಳಲದ ಅವರ ನಿಲುವು ಅವರನ್ನು ಅಂತರ್ಜಾಲ ತಾಣದಲ್ಲಿ ಖ್ಯಾತರನ್ನಾಗಿಸಿತ್ತು. ವಿಚಾರಣೆ ಸಂದರ್ಭದ ವಿಡಿಯೊ ತುಣುಕುಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು.
ಹೈಕೋರ್ಟ್ ಅವರ ವಿರುದ್ಧದ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಹಿರಿಯ ವಕೀಲ ಸುರೇಂದ್ರ ಸಿಂಗ್ ಅವರನ್ನು ಅಮಿಕಸ್ ಕ್ಯೂರಿಯಾಗಿ ನೇಮಿಸಿ, ಮಮತಾ ಪಾಠಕ್ ಅವರು ನ್ಯಾಯಯುತ ವಿಚಾರಣೆ ಎದುರಿಸುವಂತಾಗುವುದನ್ನು ನ್ಯಾಯಾಲಯ ಖಾತರಿಗೊಳಿಸಿತ್ತು ಎಂದು ಸರಕಾರಿ ವಕೀಲ ಮಾನಸ್ ಮಣಿ ವರ್ಮ ಹೇಳಿದ್ದಾರೆ.
ಸುದೀರ್ಘ ವಾದ-ಪ್ರತಿವಾದದ ನಂತರ, ಸಾಕ್ಷ್ಯಗಳು ಹಾಗೂ ಸನ್ನಿವೇಶಗಳು ದೋಷಿಯತ್ತ ಬೊಟ್ಟು ಮಾಡುತ್ತಿವೆ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು. ಸುಪ್ರೀಂ ಕೋರ್ಟ್ ನ ಇತ್ತೀಚಿನ ತೀರ್ಪುಗಳು ಹಾಗೂ ಈ ಹಿಂದಿನ ನ್ಯಾಯಾಂಗದ ನಿದರ್ಶನಗಳನ್ನು ಉಲ್ಲೇಖಿಸಿದ ನ್ಯಾಯಪೀಠ, ಅಪರಾಧ ಗಂಭೀರ ಸ್ವರೂಪದ್ದಾಗಿದ್ದು, ತಕ್ಷಣವೇ ಶರಣಾಗುವಂತೆ ಮಮತಾ ಪಾಠಕ್ ಅವರಿಗೆ ಸೂಚಿಸಿದೆ.
ಸೌಜನ್ಯ: ndtv.com