ಹೊಸದಿಲ್ಲಿ | ಹೊಟೇಲ್ ಉದ್ಯಮಿ ಹತ್ಯೆ ಪ್ರಕರಣ : ಚೋಟಾ ರಾಜನ್ ಜಾಮೀನು ರದ್ದುಪಡಿಸಿದ ಸುಪ್ರೀಂ
Update: 2025-09-17 21:54 IST
ಚೋಟಾ ರಾಜನ್ | PTI
ಹೊಸದಿಲ್ಲಿ, ಸೆ. 17: 2001ರಲ್ಲಿ ನಡೆದ ಮುಂಬೈ ಹೊಟೇಲ್ ಉದ್ಯಮಿ ಜಯ ಶೆಟ್ಟಿಯ ಹತ್ಯೆ ಪ್ರಕರಣದಲ್ಲಿ ಭೂಗತ ಪಾತಕಿ ರಾಜೇಂದ್ರ ಎಸ್. ನಿಕಲ್ಜೆ ಆಲಿಯಾಸ್ ಚೋಟಾ ರಾಜನ್‌ಗೆ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಬುಧವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಹಾಗೂ ಸಂದೀಪ್ ಮೆಹ್ತಾ ಅವರ ಪೀಠ ಚೋಟಾ ರಾಜನ್ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ ಹಾಗೂ ಜಾಮೀನು ರದ್ದುಪಡಿಸಿ ಬಾಂಬೆ ಉಚ್ಚ ನ್ಯಾಯಾಲಯ ನೀಡಿದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸಲ್ಲಿಸಿದ ವಿಶೇಷ ಮೇಲ್ಮನವಿ (ಎಸ್‌ಎಲ್‌ಪಿ)ಗೆ ಅವಕಾಶ ನೀಡಿತು.
ಇತರ ನಾಲ್ಕು ಪ್ರಕರಣಗಳಲ್ಲಿ ಕೂಡ ಚೋಟಾ ರಾಜನ್ ದೋಷಿ ಎಂದು ಸಾಬೀತಾಗಿದೆ ಹಾಗೂ ಅವರು ಸುಮಾರು 27 ವರ್ಷಗಳ ಕಾಲ ಪರಾರಿಯಾಗಿದ್ದರು ಎಂದು ಸಿಬಿಐ ಪರವಾಗಿ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್.ವಿ. ರಾಜು ಅವರ ಪ್ರತಿಪಾದನೆಯನ್ನು ಪೀಠ ಗಮನಕ್ಕೆ ತೆಗೆದುಕೊಂಡಿತು.