ಮಧ್ಯಪ್ರದೇಶ | ಇಂದೋರ್ ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿ ಎರಡು ನವಜಾತ ಶಿಶುಗಳು ಮೃತ್ಯು ಪ್ರಕರಣ; ವರದಿ ಕೇಳಿದ ಮಕ್ಕಳ ರಕ್ಷಣಾ ಆಯೋಗ
Screengrab:X
ಇಂದೋರ್: ಮಧ್ಯಪ್ರದೇಶದ ಇಂದೋರ್‌ನ ಸರ್ಕಾರಿ ಸ್ವಾಮ್ಯದ ಮಹಾರಾಜ ಯಶವಂತರಾವ್ ಆಸ್ಪತ್ರೆಯಲ್ಲಿ ಇಲಿಗಳು ಕಚ್ಚಿ ನವಜಾತ ಶಿಶುಗಳು ಸಾವನ್ನಪ್ಪಿದ ಘಟನೆ ರಾಜ್ಯದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈ ಕುರಿತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR) ಜಿಲ್ಲಾಧಿಕಾರಿಗೆ ಉನ್ನತ ಮಟ್ಟದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಗುರುವಾರ ಆದೇಶಿಸಿದೆ.
ಜನ ಸ್ವಾಸ್ಥ್ಯ ಅಭಿಯಾನ ಮಧ್ಯಪ್ರದೇಶ ಎಂಬ ಸರ್ಕಾರೇತರ ಸಂಸ್ಥೆ ನೀಡಿದ ದೂರಿನ ಆಧಾರದ ಮೇಲೆ ನೋಟಿಸ್ ನೀಡಲಾಗಿದ್ದು, ಈ ಘಟನೆ “ಮಕ್ಕಳ ಹಕ್ಕುಗಳು, ಸೋಂಕು ನಿಯಂತ್ರಣ ಪ್ರೋಟೋಕಾಲ್‌ಗಳು ಮತ್ತು ಆಸ್ಪತ್ರೆ ಸುರಕ್ಷತಾ ಮಾನದಂಡಗಳ ಗಂಭೀರ ಉಲ್ಲಂಘನೆ” ಎಂದು ಎನ್‌ಜಿಒದ ಸಂಚಾಲಕಿ ಅಮೂಲ್ಯ ನಿಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶು ಮತ್ತು ಮಕ್ಕಳ ವಾರ್ಡ್‌ಗಳಲ್ಲಿ ಕೀಟ ನಿಯಂತ್ರಣ ಹಾಗೂ ಸೋಂಕು ತಡೆಗೆ ಸಂಬಂಧಿಸಿದ ವ್ಯವಸ್ಥೆಗಳ ಸಂಪೂರ್ಣ ಲೆಕ್ಕ ಪರಿಶೋಧನೆ ನಡೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.
ಮಹಾರಾಜ ಯಶವಂತರಾವ್ ಆಸ್ಪತ್ರೆಗೆ ಸಂಬಂಧಿಸಿದ ಸರ್ಕಾರಿ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕ ಅಶೋಕ್ ಯಾದವ್ ಸಲ್ಲಿಸಿದ ವರದಿಯ ಪ್ರಕಾರ, ರವಿವಾರ ಮತ್ತು ಸೋಮವಾರ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇಲಿಗಳು ಎರಡು ಶಿಶುಗಳನ್ನು ಕಚ್ಚಿವೆ. ಒಂದು ಶಿಶುವಿನ ಬೆರಳುಗಳನ್ನು ಹಾಗೂ ಇನ್ನೊಂದು ಶಿಶುವಿನ ತಲೆ ಮತ್ತು ಭುಜಗಳನ್ನು ಇಲಿಗಳು ಕಚ್ಚಿರುವುದಾಗಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.
scroll.in ಗೆ ವರದಿಯ ಪ್ರಕಾರ, ಆಸ್ಪತ್ರೆಯ ಮಕ್ಕಳ ಘಟಕದ ನರ್ಸ್ ಗಳು ಹಿಂದೆಯೇ ಇಲಿಗಳ ಚಟುವಟಿಕೆ ಗಮನಿಸಿದ್ದರೂ, ಮೇಲಧಿಕಾರಿಗಳಿಗೆ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.
ಮೊದಲ ಮಗು ಮಂಗಳವಾರ ನ್ಯುಮೋನಿಯಾದಿಂದ ಹಾಗೂ ಎರಡನೇ ಮಗು ಬುಧವಾರ ಸೆಪ್ಟಿಸೆಮಿಯಾದಿಂದ ಮೃತಪಟ್ಟಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ವ್ಯಕ್ತಪಡಿಸಿದ ಮುಖ್ಯಮಂತ್ರಿ ಮೋಹನ್ ಯಾದವ್, “ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸರ್ಕಾರ ಸಹಿಸುವುದಿಲ್ಲ” ಎಂದು ಹೇಳಿದ್ದು, ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ. “ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಿಲ್ಲಾಧಿಕಾರಿಯವರು ಆಸ್ಪತ್ರೆಗೆ ಭೇಟಿ ನೀಡಿ, ಸ್ವತಂತ್ರ ಸಂಸ್ಥೆಯ ಮೂಲಕ ಲೆಕ್ಕಪರಿಶೋಧನೆ ನಡೆಸಲಾಗುವುದಾಗಿ ಘೋಷಿಸಿದ್ದು, ಅದರ ವರದಿಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದಾಗಿ ತಿಳಿಸಿದ್ದಾರೆ.
ಈ ನಡುವೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಘಟನೆಯನ್ನು "ಇದೊಂದು ಕೊಲೆ” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಪ್ರಧಾನಿ ಮೋದಿ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ನಾಚಿಕೆಯಿಂದ ತಲೆ ತಗ್ಗಿಸಬೇಕು. ನಿಮ್ಮ ಸರ್ಕಾರ ಬಡವರ ಆರೋಗ್ಯ ಹಕ್ಕನ್ನು ಕಸಿದುಕೊಂಡಿದೆ. ಈಗ ಮಕ್ಕಳನ್ನು ತಾಯಂದಿರ ಮಡಿಲಿನಿಂದ ಕಸಿದುಕೊಳ್ಳಲಾಗುತ್ತಿದೆ,” ಎಂದು ಅವರು ಸಾಮಾಜಿಕ ಜಾಲತಾಣ Xನಲ್ಲಿ ಟೀಕಿಸಿದ್ದಾರೆ.