×
Ad

ಬಿಹಾರ| 1 ರಿಂದ 21 ಸ್ಥಾನಕ್ಕೆ ಜಿಗಿದ ಚಿರಾಗ್ ಪಾಸ್ವಾನ್‌ರ ಎಲ್‌ಜೆಪಿ; ರಾಜ್ಯ ರಾಜಕಾರಣದಲ್ಲಿ ಮಹತ್ವದ ಹೆಜ್ಜೆ

Update: 2025-11-14 16:54 IST

ಚಿರಾಗ್ ಪಾಸ್ವಾನ್‌ (Photo: PTI)

ಪಾಟ್ನಾ: ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಾರ್ಟಿಯು (ರಾಮ್ ವಿಲಾಸ್) ಬಿಹಾರದಲ್ಲಿ ಮಹತ್ವದ ಪುನರಾಗಮನವನ್ನು ದಾಖಲಿಸಿದೆ. 2020ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಅಥವಾ ಇತರ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳದೆ ಏಕಾಂಗಿಯಾಗಿ ಸ್ಪರ್ಧಿಸಿದ್ದ ಪಾಸ್ವಾನ್‌ ರ ಪಕ್ಷ ಕೇವಲ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.

ಈ ಸಲ ಎನ್‌ಡಿಎನ ಭಾಗವಾಗಿ ಕಣಕ್ಕಿಳಿದಿದ್ದ ಎಲ್‌ಜೆಪಿ ಸ್ಥಾನ ಹಂಚಿಕೆಯಲ್ಲಿ 29 ಕ್ಷೇತ್ರಗಳನ್ನು ಪಡೆದುಕೊಂಡಿತ್ತು ಮತ್ತು ಮೈತ್ರಿಕೂಟದ ಇತರ ಹಲವಾರು ಪಕ್ಷಗಳು ಇದಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದವು. ಚುನಾವಣಾ ಫಲಿತಾಂಶಗಳ ನಡುವೆ ಚಿರಾಗ್ ಪಕ್ಷ 22 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಚಿರಾಗ್ (43) ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯತ್ತ ತನ್ನ ಒಲವನ್ನು ನಿರಂತರವಾಗಿ ವ್ಯಕ್ತಪಡಿಸುತ್ತಲೇ ಬಂದಿದ್ದು, 2020ರಲ್ಲಿ ತನ್ನ ಮುಖ್ಯ ಸಮಸ್ಯೆ ನಿತೀಶ್‌ ಕುಮಾರ್ ಅವರೊಂದಿಗಿತ್ತು ಎಂದು ಹೇಳಿದರು. 2020ರಲ್ಲಿ ಜೆಡಿಯುನ ಕಳಪೆ ಸಾಧನೆಗೆ ಎಲ್‌ಜಿಪಿ ಪಡೆದಿದ್ದ ಮತಗಳು ಒಂದು ಕಾರಣ ಎಂದು ವ್ಯಾಪಕವಾಗಿ ಪರಿಗಣಿಸಲಾಗಿತ್ತು.

ನಂತರದ ಬೆಳವಣಿಗೆಗಳು ಕ್ಷಿಪ್ರವಾಗಿ ನಡೆದಿದ್ದವು. ಅವರ ದಿವಂಗತ ತಂದೆ ರಾಮ್ ವಿಲಾಸ್ ಪಾಸ್ವಾನ್ ಸ್ಥಾಪಿಸಿದ್ದ ಮೂಲ ಎಲ್‌ಜೆಪಿ ಚಿರಾಗ್‌ ರ ಚಿಕ್ಕಪ್ಪ ಪಶುಪತಿ ನಾಥ್ ಪಾರಸ್ ಅವರು ಪ್ರತ್ಯೇಕ ಬಣ ರಚಿಸುವುದರೊಂದಿಗೆ ಇಬ್ಭಾಗಗೊಂಡಿತ್ತು. 2024ರ ಲೋಕಸಭಾ ಚುನಾವಣೆಗಳ ವೇಳೆಗೆ ಚಿರಾಗ್ ಮರಳಿ ಎನ್‌ಡಿಎ ತೆಕ್ಕೆಗೆ ಸೇರಿದ್ದರು. ಎಲ್‌ಜೆಪಿ ಒಂದು ಲೋಕಸಭಾ ಸ್ಥಾನವನ್ನು ಗೆದ್ದಿದ್ದು, ಚಿರಾಗ್ ಪ್ರಧಾನಿ ಮೋದಿಯವರ ತೃತೀಯ ಅಧಿಕಾರಾವಧಿಯಲ್ಲಿ ಸಚಿವರಾಗಿದ್ದಾರೆ.

ಒಂದು ಕಾಲದಲ್ಲಿ ತನ್ನ ತಂದೆಯ ಸಮಾಜವಾದಿ ಸಹೋದ್ಯೋಗಿಯಾಗಿದ್ದ ನಿತೀಶ್‌ (74) ಅವರೊಂದಿಗಿನ ಭಿನ್ನಾಭಿಪ್ರಾಯವನ್ನು ಚಿರಾಗ್ ಇತ್ತೀಚಿಗೆ ಪ್ರಸ್ತಾಪಿಸುತ್ತಿಲ್ಲ.

ಎಂದಾದರೂ ನೀವು ರಾಜ್ಯ ರಾಜಕಾರಣಕ್ಕೆ ಮರಳುತ್ತೀರಾ ಎಂದು ಈ ಹಿಂದೆ ಸುದ್ದಿಗಾರರು ಕೇಳಿದ್ದ ಪ್ರಶ್ನೆಗೆ ಚಿರಾಗ್, ಅದು 2030ರ ವೇಳೆಗೆ ಸಂಭವಿಸಲಿದೆ ಎಂದು ಉತ್ತರಿಸಿದ್ದರು. ವಿವಿಧ ಕೇಂದ್ರ ಸರಕಾರಗಳಲ್ಲಿ ಸಚಿವರಾಗಿದ್ದ ತನ್ನ ತಂದೆ ಹೆಚ್ಚಾಗಿ ರಾಷ್ಟ್ರಮಟ್ಟದ ರಾಜಕಾರಣದಲ್ಲೇ ಉಳಿದುಕೊಂಡಿದ್ದರು ಎಂದು ಅವರು ಒತ್ತಿ ಹೇಳಿದ್ದರು. ಆದರೆ ಚಿರಾಗ್ ಈ ಬಗ್ಗೆ ಯಾವುದೇ ನಿರ್ಧಾರವನ್ನು ಇನ್ನೂ ತೆಗೆದುಕೊಂಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News