ಮಕ್ಕಳಲ್ಲಿ ದೀರ್ಘಕಾಲದ ಅಪೌಷ್ಠಿಕತೆ | ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಐದು ವರ್ಷದೊಳಗಿನ ಶೇ. 17ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿದ್ದರೆ, ಶೇ. 36ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ ಹಾಗೂ ಶೇ. 6ರಷ್ಟು ಮಕ್ಕಳು ಕೃಶವಾಗಿದ್ದಾರೆ ಎಂದು ಜುಲೈ 26ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು ತಿಳಿಸಿದೆ.
ಕುಂಠಿತ ಬೆಳವಣಿಗೆ, ಕೃಶ ಹಾಗೂ ಕಡಿಮೆ ತೂಕ 0-5 ವರ್ಷದೊಳಗಿನ ಮಕ್ಕಳಲ್ಲಿನ ಅಪೌಷ್ಠಿಕತೆಯನ್ನು ಸೂಚಿಸುವ ಪ್ರಮುಖ ಮಾನದಂಡವಾಗಿದೆ. ಮಕ್ಕಳು ತಮ್ಮ ವಯಸ್ಸಿಗಿಂತ ಗಿಡ್ಡವಾಗಿರುವುದನ್ನು ಕುಂಠಿತ ಬೆಳವಣಿಗೆ ಸೂಚಿಸುತ್ತದೆ. ಇದು ದೀರ್ಘಕಾಲದ ಅಪೌಷ್ಠಿಕತೆಯಿಂದ ಉದ್ಭವಿಸುವ ಸ್ಥಿತಿಯಾಗಿದೆ.
ಮಕ್ಕಳು ತಮ್ಮ ಎತ್ತರಕ್ಕಿಂತ ತೀರಾ ತೆಳ್ಳಗಿರುವುದನ್ನು ಕೃಶತ್ವ ಸೂಚಿಸುತ್ತದೆ. ಇದು ಇತ್ತೀಚಿನ ಅಪೌಷ್ಠಿಕತೆ ಹಾಗೂ ತೀವ್ರ ತೂಕ ನಷ್ಟದಿಂದ ಉದ್ಭವಿಸುವ ಸ್ಥಿತಿಯನ್ನು ಸೂಚಿಸುತ್ತದೆ.
ಮಕ್ಕಳು ತಮ್ಮ ವಯಸ್ಸಿಗಿಂತ ಕಡಿಮೆ ತೂಕ ಹೊಂದಿರುವುದನ್ನು ಕಡಿಮೆ ತೂಕ ಎಂದು ಹೇಳಲಾಗುತ್ತದೆ. ಈ ಸ್ಥಿತಿಯು ಕುಂಠಿತ ಬೆಳವಣಿಗೆ ಹಾಗೂ ಕೃಶತ್ವ ಎರಡನ್ನೂ ಒಳಗೊಂಡಿದ್ದು, ದೀರ್ಘಕಾಲೀನ ಅಥವಾ ತೀವ್ರ ಅಪೌಷ್ಠಿಕತೆ ಅಥವಾ ಎರಡನ್ನೂ ಒಳಗೊಂಡಿರುವ ಅಪೌಷ್ಠಿಕತೆಯನ್ನು ಒಳಗೊಂಡಿರುತ್ತದೆ.
ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣ ದೇವಿ, ಜೂನ್ ತಿಂಗಳ ಪೋಷಣ್ ಟ್ರ್ಯಾಕರ್ ಪ್ರಕಾರ, 6 ವರ್ಷದೊಳಗಿನ ಸುಮಾರು 8.57 ಕೋಟಿ ಮಕ್ಕಳ ತೂಕವನ್ನು ಅಳೆಯಲಾಗಿದ್ದು, ಈ ಪೈಕಿ ಐದು ವರ್ಷದೊಳಗಿನ ಶೇ. 35ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದರೆ, ಶೇ. 17ರಷ್ಟು ಮಕ್ಕಳು ಮಾತ್ರ ಕಡಿಮೆ ತೂಕ ಹಾಗೂ ಶೇ. 6ರಷ್ಟು ಮಕ್ಕಳು ಮಾತ್ರ ಕೃಶವಾಗಿರುವುದು ಕಂಡು ಬಂದಿದೆ ಎಂದು ತಿಳಿಸಿದರು.
ರಾಜ್ಯವಾರು ದತ್ತಾಂಶದ ಪ್ರಕಾರ, ಕುಂಠಿತ ಬೆಳವಣಿಗೆಯಲ್ಲಿ ಉತ್ತರ ಪ್ರದೇಶ ಅತ್ಯಧಿಕ ಪ್ರಕರಣಗಳನ್ನು ಹೊಂದಿದ್ದು, ಶೇ. 46.36ರಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಹೊಂದಿದ್ದಾರೆ. ಉತ್ತರ ಪ್ರದೇಶದ ನಂತರ ಲಕ್ಷದ್ವೀಪದಲ್ಲಿ ಶೇ. 46.31, ಮಹಾರಾಷ್ಟ್ರ ಹಾಗೂ ಮಧ್ಯಪ್ರದೇಶದಲ್ಲಿ ಕ್ರಮವಾಗಿ ಶೇ. 44.59 ಹಾಗೂ ಶೇ. 41.61ರಷ್ಟು ಕುಂಠಿತ ಬೆಳವಣಿಗೆ ವರದಿಯಾಗಿದೆ ಎಂದು ಅವರು ಹೇಳಿದರು.
ತೀವ್ರ ಅಪೌಷ್ಠಿಕತೆಯ ಚಿಹ್ನೆಯಾದ ಕೃಶತ್ವ ಲಕ್ಷದ್ವೀಪದಲ್ಲಿ ಗಂಭೀರ ಸ್ವರೂಪದಲ್ಲಿದ್ದು, ಇದರಿಂದ ಶೇ. 13.22ರಷ್ಟು ಮಕ್ಕಳು ತೊಂದರೆಗೀಡಾಗಿದ್ದಾರೆ. ಬಿಹಾರ ಮತ್ತು ಗುಜರಾತ್ ನಲ್ಲಿ ಕೃಶತ್ವದ ಪ್ರಮಾಣವು ಕ್ರಮವಾಗಿ ಶೇ. 9.81 ಹಾಗೂ ಶೇ. 9.16ರಷ್ಟಿದೆ. ಇಂತಹ ಅತ್ಯಧಿಕ ಶೇಕಡಾವಾರು ಪ್ರಮಾಣವು ಇತ್ತೀಚಿಗೆ ಮಕ್ಕಳಲ್ಲಿ ಆಗಿರುವ ತೂಕ ನಷ್ಟವನ್ನು ಸೂಚಿಸುತ್ತಿದ್ದು, ಇದು ನಿರ್ದಿಷ್ಟವಾಗಿ ಅಸಮರ್ಪಕ ಆಹಾರ ಸೇವನೆ ಅಥವಾ ರೋಗಗಳಿಂದ ಸಂಭವಿಸುತ್ತದೆ.
ಕಡಿಮೆ ತೂಕದ ಮಕ್ಕಳ ಪ್ರಮಾಣದ ಪೈಕಿ ಮಧ್ಯಪ್ರದೇಶವು ಮುಂಚೂಣಿಯಲ್ಲಿದ್ದು, ಶೇ. 26.21ರಷ್ಟಿದ್ದರೆ, ದಾದ್ರಾ ಮತ್ತು ನಗರ್ ಹವೇಲಿ ಹಾಗೂ ದಾಮನ್ ಮತ್ತು ದಿಯುನಲ್ಲಿ ಈ ಪ್ರಮಾಣವು ಶೇ. 26.41ರಷ್ಟಿದೆ. ಲಕ್ಷದ್ವೀಪ ಮತ್ತೆ ಕಳವಳಕಾರಿ ದರವನ್ನು ಪ್ರದರ್ಶಿಸಿದ್ದು, ಈ ಪ್ರಮಾಣ ಶೇ. 23.25ರಷ್ಟಿದೆ.
ಆದರೆ, ಈ ಅಂಕಿ-ಸಂಖ್ಯೆಗಳಿಗೆ ಹೋಲಿಸಿದರೆ ಕೆಲವು ರಾಜ್ಯಗಳು ತೀರಾ ಉತ್ತಮ ಸ್ಥಿತಿಯಲ್ಲಿವೆ.
ಗೋವಾ ರಾಜ್ಯದ ಕುಂಠಿತ ಬೆಳವಣಿಗೆಯ ದರವು ಶೇ. 5.84ರಷ್ಟಿದ್ದು, ಕೃಶತ್ವದ ದರವು ಶೇ. 0.85 ಹಾಗೂ ಕಡಿಮೆ ತೂಕದ ಪ್ರಮಾಣವು ಶೇ. 2.18ರಷ್ಟಿದೆ. ಸಿಕ್ಕಿಂ ಮತ್ತು ಲಡಾಖ್ ಕೂಡಾ ಸಾಕಷ್ಟು ಕಡಿಮೆ ಅಪೌಷ್ಠಿಕತೆ ದರವನ್ನು ಹೊಂದಿದ್ದು, ಈ ರಾಜ್ಯಗಳಲ್ಲಿ ಪರಿಣಾಮಕಾರಿ ಪೌಷ್ಠಿಕತೆ ನೀತಿಗಳು ಅಥವಾ ಒಟ್ಟಾರೆಯಾಗಿ ಉತ್ತಮ ಆರೋಗ್ಯ ಸ್ಥಿತಿ ಇರುವುದನ್ನು ಸೂಚಿಸುತ್ತಿವೆ.