ಭೂಕುಸಿತ ಭೀತಿಯಿರುವ ಪ್ರದೇಶಗಳಿಂದ ನಾಗರಿಕರು ತಕ್ಷಣವೇ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳಬೇಕು: ವಯನಾಡ್ ಜಿಲ್ಲಾಡಳಿತ ಸೂಚನೆ
PC : PTI
ವಯನಾಡ್: ಸೋಮವಾರ ಕೇರಳದ ಇತಿಹಾಸದಲ್ಲಿಯೇ ಸಂಭವಿಸಿರುವ ಭೀಕರ ಭೂಕುಸಿತದ ನಂತರ, ಭೂಕುಸಿತ ಭೀತಿ ಇರುವ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರು ತಕ್ಷಣವೇ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳಬೇಕು ಎಂದು ವಯನಾಡ್ ಜಿಲ್ಲಾಡಳಿತವು ಜನರಿಗೆ ಸೂಚನೆ ನೀಡಿದೆ.
ಸೋಮವಾರ ಸಂಭವಿಸಿದ ಭೀಕರ ಭೂಕುಸಿತದಲ್ಲಿ ಮುಂಡಕ್ಕೈ ಹಾಗೂ ಚೂರಲ್ ಮಲ ಗ್ರಾಮಗಳು ಸಂಪೂರ್ಣವಾಗಿ ನಾಶವಾಗಿದ್ದು, ನೂರಾರು ಮಂದಿ ಈ ದುರಂತದಲ್ಲಿ ತಮ್ಮ ಜೀವ ಕಳೆದುಕೊಂಡಿದ್ದಾರೆ. ಚೂರಲ್ ಮಲ ಹಾಗೂ ಮುಂಡಕ್ಕೈ ಗ್ರಾಮಸ್ಥರಿಗೆ ಈ ಭೂಕುಸಿತದ ಕುರಿತು ಮುಂಚಿತವಾಗಿಯೇ ಮುನ್ನೆಚ್ಚರಿಕೆ ನೀಡುವಲ್ಲಿ ವಿಫಲಗೊಂಡಿರುವ ವಯನಾಡ್ ಜಿಲ್ಲಾಡಳಿತದ ವಿರುದ್ಧ ತೀವ್ರ ಸ್ವರೂಪದ ಟೀಕೆ ವ್ಯಕ್ತವಾಗಿವೆ.
ಭೂಕುಸಿತದ ಭೀತಿ ಹೊಂದಿರುವ ವಯನಾಡ್ ಜಿಲ್ಲೆಯ ಕುರುಂಬಲಕೊಟ್ಟ, ಲಕ್ಕಿಡಿ, ಮನಿಕ್ಕುನ್ನುಮಲ, ಮುತ್ತಿಲ್, ಕೊಲ್ಪಾರಾ ಕಾಲನಿ, ಕಪ್ಪಿಕ್ಕಲಂ, ಸುಗಂಧಗಿರಿ ಹಾಗೂ ಪೊಳುತ್ತನ ಗ್ರಾಮಗಳ ನಿವಾಸಿಗಳಿಗೆ ಎಚ್ಚರಿಕೆಯಿಂದಿರುವಂತೆ ಬುಧವಾರ ವಯನಾಡ್ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ ಮನವಿ ಮಾಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿರುವುದರಿಂದ, ಈ ಪ್ರದೇಶಗಳಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಪರಿಹಾರ ಶಿಬಿರಗಳಿಗೆ ಸ್ಥಳಾಂತರಗೊಳ್ಳುವಂತೆ ಸಲಹೆ ನೀಡಲಾಗಿದೆ.
ಸೋಮವಾರ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿದ ಭೀಕರ ಕುಸಿತದಲ್ಲಿ ಇದುವರೆಗೆ 200ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟಿರುವವರ ಪೈಕಿ 77 ಮಂದಿ ಪುರುಷರು, 67 ಮಂದಿ ಮಹಿಳೆಯರು ಹಾಗೂ 22 ಮಕ್ಕಳನ್ನು ಗುರುತಿಸಲಾಗಿದೆ. 75 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.