ತೀವ್ರ ಆಘಾತಕ್ಕೆ ಒಳಗಾಗಿದ್ದೆ : ಶೂ ಎಸೆತ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಸಿಜೆಐ ಬಿ.ಆರ್. ಗವಾಯಿ
ಸಿಜೆಐ ಬಿ.ಆರ್. ಗವಾಯಿ | Photo Credi : PTI
ಸ್ಟಾಕ್‌ಹೋಮ್, ಅ. 9: ತನ್ನ ಮೇಲೆ ಸುಪ್ರೀಂ ಕೋರ್ಟ್‌ನಲ್ಲೇ ನಡೆದ ‘‘ಶೂ ದಾಳಿ’’ಯ ಬಗ್ಗೆ ಗುರುವಾರ ಪ್ರತಿಕ್ರಿಯಿಸಿರುವ ಭಾರತದ ಮುಖ್ಯ ನ್ಯಾಯಾಧೀಶ ಬಿ. ಆರ್. ಗವಾಯಿ, ಈ ಘಟನೆಯಿಂದ ನಾನು ತೀವ್ರ ಆಘಾತಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದಾರೆ.
ನ್ಯಾಯಾಲಯದಲ್ಲಿ ನಡೆದ ಸಂವಾದವೊಂದರ ವೇಳೆ, ಈ ವಿಷಯದ ಬಗ್ಗೆ ಮಾತನಾಡಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು, ಆದರೆ. ‘‘ಈ ಘಟನೆ ಈಗ ನನ್ನ ಪಾಲಿಗೆ ಮರೆತುಹೋದ ಅಧ್ಯಾಯ’’ ಎಂಬುದಾಗಿ ಬಣ್ಣಿಸಿದರು. ‘‘ಸೋಮವಾರ ನಡೆದ ಘಟನೆಯಿಂದ ನನ್ನ ಸಹೋದರ (ಅವರ ನ್ಯಾಯಪೀಠದಲ್ಲಿದ್ದ ಇನ್ನೋರ್ವ ನ್ಯಾಯಾಧೀಶ) ಮತ್ತು ನಾನು ತೀವ್ರವಾಗಿ ಆಘಾತಗೊಂಡಿದ್ದೇವೆ. ಈಗ ನಮ್ಮ ಪಾಲಿಗೆ ಅದೊಂದು ಮುಗಿದ ಅಧ್ಯಾಯವಾಗಿದೆ’’ ಎಂದು ಮುಖ್ಯ ನ್ಯಾಯಮೂರ್ತಿ ಗವಾಯಿ ಹೇಳಿದರು.
ಗುರುವಾರ ಮುಖ್ಯ ನ್ಯಾಯಮೂರ್ತಿಯವರ ನ್ಯಾಯಪೀಠದಲ್ಲಿದ್ದ ಇನ್ನೋರ್ವ ನ್ಯಾಯಾಧೀಶ ನ್ಯಾ. ಉಜ್ಜಲ್ ಭೂಯನ್, ಶೂ ಎಸೆದ ಘಟನೆಯನ್ನು ಬಲವಾಗಿ ಖಂಡಿಸಿದರು. ‘‘ಈ ಘಟನೆಯ ಬಗ್ಗೆ ನನಗೆ ನನ್ನದೇ ಆದ ಅಭಿಪ್ರಾಯವಿದೆ. ಅವರು ಭಾರತದ ಮುಖ್ಯ ನ್ಯಾಯಾಧೀಶರು. ಇದು ಹಾಸ್ಯದ ಸಂಗತಿಯಲ್ಲ. ಇದರ ಬಗ್ಗೆ ನಾನು ಲಘು ಧೋರಣೆ ಹೊಂದಿಲ್ಲ. ಈ ದಾಳಿಯು ಸುಪ್ರೀಂ ಕೋರ್ಟ್ ಮೇಲೆ ನಡೆದ ದಾಳಿಯಾಗಿದೆ’’ ಎಂದು ನ್ಯಾ. ಉಜ್ಜಲ್ ಭೂಯನ್ ಹೇಳಿದರು.
ಶೂ ಎಸೆದ ವಕೀಲ ರಾಕೇಶ್ ಕಿಶೋರ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗದ ಮುಖ್ಯ ನ್ಯಾಯಾಧೀಶರ ನಿರ್ಧಾರವನ್ನು ಉಲ್ಲೇಖಿಸಿ ನ್ಯಾ. ಉಜ್ಜಲ್ ಮಾತನಾಡಿದ್ದರೆ ಎಂಬುದಾಗಿ ಭಾವಿಸಲಾಗಿದೆ.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಘಟನೆಯನ್ನು ಖಂಡಿಸಿದರು. ‘‘ಆ ಘಟನೆಯು ಅಕ್ಷಮ್ಯ’’ ಎಂದು ಬಣ್ಣಿಸಿದರು ಹಾಗೂ ಪ್ರಕರಣ ಮುಕ್ತಾಯಗೊಂಡಿದೆ ಎಂಬುದಾಗಿ ಭಾವಿಸುವ ಮುಖ್ಯ ನ್ಯಾಯಾಧೀಶರ ‘‘ಘನತೆ ಮತ್ತು ಔದಾರ್ಯವನ್ನು’’ ಅವರು ಶ್ಲಾಘಿಸಿದರು.
ಈ ಹೇಯ ಘಟನೆಯ ಬಗ್ಗೆ ದೇಶಾದ್ಯಂತ ಸಾರ್ವಜನಿಕರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಇತರ ಹಲವಾರು ನಾಯಕರು ಘಟನೆಯನ್ನು ಖಂಡಿಸಿದ್ದಾರೆ. ಪ್ರಧಾನಿ ಮೋದಿ ಘಟನೆ ನಡೆದ ದಿನದಂದೇ ಭಾರತದ ಮುಖ್ಯ ನ್ಯಾಯಮೂರ್ತಿ ಗವಾಯಿ ಜೊತೆ ವ್ಯಕ್ತಿಗತವಾಗಿ ಮಾತನಾಡಿದ್ದಾರೆ.
ಗುರುವಾರ, ಮಹಾರಾಷ್ಟ್ರದ ಥಾಣೆಯಲ್ಲಿ ಹಲವಾರು ಅಂಬೇಡ್ಕರ್‌ವಾದಿ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದವು. ಈ ಘಟನೆಯು ‘‘ಸಾಂವಿಧಾನಿಕ ಮೌಲ್ಯಗಳ ಮೇಲೆ ನಡೆದ ದಾಳಿ ಮತ್ತು ನ್ಯಾಯಾಂಗಕ್ಕೆ ಆಗಿರುವ ಅವಮಾನವಾಗಿದೆ’’ ಎಂಬುದಾಗಿ ಅವು ಹೇಳಿವೆ.